Devaranama todala nudi seve

ಹರಿವಾಯುಗುರುಗಳ ಪ್ರೇರಣೆಯಿಂದ ಹಾಗು ನಮ್ಮ ತಾಯಿಯ ಆಶೀರ್ವಾದದಿಂದ ರಚಿತವಾದ ಭಗವನ್ನಾಮ ಸಂಕೀರ್ತನೆಯ ತೊದಲುನುಡಿ ಸೇವೆ

ಶ್ರೀರಾಮನಾಮ ಜಪಿಸಿದವಗೆ ಉಂಟೇ ಭವದ ಬಂಧನ?

ಪವಿತ್ರವಾದ ವಿಪ್ರ ಜನ್ಮದಿ ಬಂದು, ವಾವ್ವಂಶನ ಮತದಲ್ಲಿ ಹುಟ್ಟಿ, ಎಲ್ಲೋ ಹುಟ್ಟಿ ಎಲ್ಲೋ ಬೆಳೆದ ನಾನು, ಸದಾ ನನ್ನ ಶ್ರೇಯಸ್ಸನೇ ಕೋರಿದ ತಾಯಿಯ ಕನಸನ್ನು ಈಡೇರಿಸಿ ಇವತ್ತಿನ ದಿನ ಶ್ರೀಹರಿವಾಯುಗುರುಗಳ ಕೃಪೆಯಿಂದ ಜೀವನದ ಉತ್ಕೃಷ್ಟದಲ್ಲಿದ್ದರೆ ಅದಕ್ಕೆ ಆ ತಾಯಿಯ ಆಶೀರ್ವಾದವೇ ಕಾರಣ. ನನ್ನ ಮಕ್ಕಳು ಹೀಗೇ ಇದ್ದು, ಹೀಗೇ ಬಾಳಿ, ಸದಾ ಸತ್ಪ್ರಜೆಗಳಾಗಬೇಕೆಂದು ಸದಾ ನಮ್ಮ ಒಳಿತನ್ನೇ ಬಯಸಿ, ಶ್ರಮಿಸಿ, ಎಂದೂ ನಿಟ್ಟುಸಿರು ಬಿಡದೆ, ಐಟಿಐ ರಾಯರ ಪಾದಕ್ಕೆ ಬಂದದ್ದೆಲ್ಲವನ್ನೂ ಅರ್ಪಿಸಿ, ಆಕಸ್ಮಿಕವಾಗಿ ಮರೆಯಾದ ಆ ದೇವತೆಗೆ ನಾನೇನು ಅರ್ಪಿಸಿದರೂ ಕಡಿಮೆ. ಇವತ್ತು, ಆ ದೇವತೆ ಬದುಕಿದ್ದರೆ ನನ್ನ ಔನತ್ಯ ಕಂಡಿದ್ದರೆ ಎಷ್ಟು ಆನಂದ ಪಡುತ್ತಿದ್ದಳೋ! ಆಕೆಯ ಸುಗರ್ಭದಲ್ಲಿ ಬಂದ ಪುಣ್ಯಕ್ಕಾಗಿ, ಆಕೆಯ ಕನಸನ್ನು ನನಸು ಮಾಡಲು ಅಹರ್ನಿಶಿ ಪ್ರಯತ್ನಿಸುತ್ತಿರುವ ನಾನು, ಈ ರೀತಿ ಶ್ರೀಹರಿವಾಯುಗುರುಗಳನ್ನು ಕೊಂಡಾಡುವ ಪದ-ಪದ್ಯಗಳನ್ನು ರಚಿಸುವುದರ ಮೂಲಕ ಆ ಪುಣ್ಯವತಿಯ ಖುಣವನ್ನು ತೀರಿಸುವ ಪ್ರಯತ್ನ ನನ್ನದು.  ಈ ದಿಶೆಯಲ್ಲಿ  ಸಂಗೀತದ ಗಂಧವರಿಯದ ನಾನು ಪಾಮರನಾದ್ದರಿಂದ ಯಥಾಶಕ್ತಿ ಈ ಭಗವನ್ನಾಮ ರಚಿಸುವ ಕಾರ್ಯ ಆರಂಭಿಸಿದ್ದೇನೆ. ಸಂಗೀತದಲಿ ಪುರಂದರದಾಸರಾಗದಿದ್ದರೂ, ವಿರಕ್ತಿಯಲಿ ಕನಕದಾಸರಾಗದಿದ್ದರೂ, ತಾಳ್ಮೆಯಲಿ ವಿಜಯರಾಯರಾಗದಿದ್ದರೂ, ಭಕ್ತಿಯಲಿ ಭಾಗಣ್ಣರಾಗದಿದ್ದರೂ, ಜಾಣ್ಮೆಯಲಿ ಜಗನ್ನಾಥದಾಸರಾಗದಿದ್ದರೂ ಕೂಡ, ಸಾಧನ ಮಾರ್ಗದಲಿ ಇಡುತ್ತಿರುವ ಈ ಹೆಜ್ಜೆ, ಮುಂದೊಂದು ದಿನ, ಈ ದಾಸಶ್ರೇಷ್ಟರ ಪಾದರಜಕ್ಕೆ ಸಮವಾಗಿಸಿದರೂ ಕೂಡ ಸಾಕು. ನನ್ನ ಹೆತ್ತ ಆ ತಾಯಿಯ ಆಶೀರ್ವಾದದಿಂದ ಅದು ಖಂಡಿತ ಆಗುವುದೆಂಬ ಅಚಲ ನಂಬಿಕೆ ನನ್ನಲಿ. ಒಪ್ಪೆಲ್ಲಾ ಸೀನಪ್ಪನದು, ತಪ್ಪೇಲಾ ನನ್ನದೇ! ಇದೇ ರೀತಿ, ಸಂಗೀತ ಶಾರದೆ ಒಲಿದು ನನ್ನಿಂದ ಸಂಪ್ರದಾಯಬದ್ಧ ದೇವರನಾವನ್ನು ಅಂಕಿತ-ಸಹಿತ ರಚಿಸಲು ಅನುಕೂಲವಾಗುವಂತೆ ಅನುಗ್ರಹಿಸೆಂದು ಆ ನನ್ನ ಪೆತ್ತ ತಾಯಿಗೆ ಶಿರಸಾಷ್ಟಾಂಗ ನಮನ ಸಲ್ಲಿಸುತ್ತಾ…

ವಂದಿಸುವುದಾದಿಯಲಿ ಗಣನಾಥನ

ಲಂಬೋದರನೆ ನಮಿಪೆನು ನಾ ಶಿರಬಾಗಿ ಎಮ್ಮ ದುರಿತಗಳ ಕಳೆದು  ಮೋದಸೂಧನನ ಧ್ಯಾನದಿ ನಿಲಿಸೋ ||೧|| ಪ್ರಥಮ ಪೂಜೆಯು ನಿನಗೆ ಪ್ರತಿ ದಿನವು ಮಾಡುವೆನು ಎಡೆಬಿಡದೆ ಸುವಿಧ್ಯೆಯನು ಕೊಟ್ಟು ಲಕ್ಷ್ಮಿವಲ್ಲಭನ ನಾಮವ ನಾಲಿಗೆಲಿ ನಿಲಿಸೋ ||೨|| ಗೌರಿಸುತನೆ ಪಾಶಾಂಕುಶ ಧಾರನೆ ಕಮಲನಯನನೆ ಸುಂದರವದನನೆ ಸೇವಕನು ನಾ ನಿನ್ನ, ಶಿವತನಯನೆ ಮಾಧವನಲಿ ಮನವ ನಿಲಿಸೋ ||೩|| ಮೂಷಿಕವಾಹನವಂತೆ ಮೋದಕ ಹಸ್ತವಂತೆ ಉದರದಿ ಸರ್ಪವಂತೆ ಅನುದಿನವೂ ಎಮ್ಮನು ಪೊರೆದು ಉಪೇಂದ್ರಮೂರ್ತಿಯ ಸ್ಮರಣೆಯ ನಿಲಿಸೋ ||೪||

______________________________________________

ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ

ರಾಮ ನಿನ್ನ ನಾಮದ ಬಲ ಒಂದಿದ್ದರೆ ಸಾಕು ಅದುವೆ ಕಲ್ಪತರು-ಕಾಮಧೇನು, ಆನಂದಪ್ರದಾಯಕ ರಾಮ ರಾಮ ನಮ ಒಂದೇ ಸಾಕು ||೧|| ದಶರಥನಂದನ ರಘು ರಾಮ ಕೌಸಲ್ಯ ಸುಪ್ರಜ ಸುಂದರ ರಾಮ ||೨|| ರಘುಕುಲಸೋಮ ರಾಜೀವಲೋಚನ ಕಲ್ಯಾಣರಾಮ ಜಾನಕಿವಲ್ಲಭ ಶೇಷಶಯನ ಪಟ್ಟಾಭಿರಾಮ ||೩|| ಸುಮಿತ್ರಪುತ್ರ ಸೇವಿತ, ಪರತ್ಪರ ಕೋದಂಡರಾಮ ವಿಶ್ವಾಮಿತ್ರ ಪ್ರಿಯ ದಾನವಾಂತಕ ವಶಿಷ್ಟರಾಮ ||೪|| ಅಂಜನಸುತಸ್ವಾಮಿ, ಧನುರ್ಧರ ಜಿತೇಂದ್ರರಾಮ ಸುಗ್ರೀವ ಮಿತ್ರ ಸುಜಗತ್ಚರಿತ್ರ ತ್ರಿವಿಕ್ರಮ ರಾಮ ||೫|| ವಾಲಿಪ್ರಮತನ ವಿಭೀಷಣಸಕ ಶೂರ ರಾಮ ಕುಂಭಕರ್ಣ ರಾವಣಾಂತಕ ತ್ರಿಲೋಕರಕ್ಷಕ ರಾಮ ||೬|| ಎಂದೆಂದೂ ನಿನ್ನ ನಾಮವೆ ಗತಿಯೆನಗೆ ನಾ ಮಾಡಿದ ಪಾಪವ ಕಳೆದು ಉಪೇಂದ್ರನ ಲೋಕವ ತೋರೋ ಚೆಲುವ ರಾಮ ||೭|| ___________________________________________________________________

ನೋಡಿದೆನು ಗುರುರಾಘವೇಂದ್ರರ ಮಾಡಿದೆನು ಭಕುತಿಯಲಿ ವಂದನೆಗಳು

ಕಂಡೆ ನಾ ಗುರುರಾಯ ರಾಘವೇಂದ್ರರ ಕಂಡೆ ನಾ ಶರಣು ಹೊಕ್ಕೆನು ರಾಯರೆ ನಿಮ್ಮ ಪಾದಕಮಲಕೆ ||೧|| ನರಹರಿಯ ನೆನೆಯುತ ಹಯವದನ ಕೊಂಡಾಡುವ ಕಾಶಾಯಧಾರಿ ಯೋಗಿ ವರೇಂದ್ರ ಮುದ್ದು ವೄಂದಾವನದಿ ಜಪವ ಮಾಡುವ ||೨|| ನಾಮ ಮುದ್ರೆಯೊಳಿಂದ ಕಂಗೊಳಿಸುತ ಕೊರಳೊಳು ತುಳಸಿಮಣಿಯು ಕೈಯಲಿ ಕಮಂಡಲವು ಹಿಡಿದು ಸದಾ ಮೂಲ ರಾಮನ ನೆನೆಯುವ ||೩|| ಕರುಣಾಸಾಗರನೆ ನಿನ್ನ ಮಗುವೆಂದು ಎನಿಸಿ ನಿನ್ನ ಕರಕಮಲವ ಸದಾ ಎನ್ನ ಮೇಲೆ ಇರಿಸಿ ಉಪೇಂದ್ರನ ಪ್ರೀತಿಯ ಬಡಿಸುತಾ ಪೊರೆಯೋ ||೪|| _________________________________________________________________________

ನಂಬಿದೆ ನಿನ್ನ ಪಾದ, ಗುರುಮುಖ್ಯಪ್ರಾಣ ನಂಬಿದೆ ನಿನ್ನ ಪಾದ

ಎಂದೆಂದೂ ನಿನ್ನ ಪಾದವೆ ಗತಿಯೆಂದೂ ನಂಬಿದೆನೂ ಮೂರವತಾರದ ಮಧ್ವರಾಯ ಎರಡು ದಿನದ ಸಂಸಾರದಲಿ ನಾನು ನನ್ನದು ಎಂಬ ಅಹಂಕಾರದಲಿ ಮೆರೆದು ಬಲುವಿಧ ಆಸೆಯ ಪಟ್ಟು ನೀರಜಾಕ್ಷನ ಮರೆತು ಗರ್ವದಿ ಬಾಳಿದೆನೈಯ್ಯ ||೧|| ಎನ್ನ ಅಹಂಕಾರವ ಅಳಿಸುವ ಅನ್ಯರೊಬ್ಬರು ಇಲ್ಲ, ಕ್ಷಮಿಸಿ ಪರಿಪಾಲಿಸು ಎನ್ನ ತ್ರಿಕೋನಮಂಡಲದಲಿ ನಳಿನನಾಭನ ಬರಿಸೋ ವೃಕೋದರ||೨|| ಬಾರಿಬಾರಿ ನಿನ್ನ ಪಾದಕೆರಗುವೆ ಎನ್ನ ಪಾಪಾಂಗಳ ನೀಗಿಸಿ, ಖಗಪತಿ ಒಡೆಯ ಉಪೇಂದ್ರನ ಮನದಲ್ಲಿ ನಿಲ್ಲಿಸೋ, ಮಧ್ವೇಶನ ದೂತ ಹನುಮಂತರಾಯ ||೩|| _______________________________________________________________________

ದಾಸನ ಮಾಡಿಕೋ ಎನ್ನ, ಸ್ವಾಮಿ ಸಾಸಿರನಾಮದ ವೆಂಕಟರಮಣ

ವಂದೇ ಶ್ರೀಕೃಷ್ಣಮ್ ಶ್ರೀಪತಿಂ ಸರ್ವದೇವನಮಸ್ಕೃತಂ ಸಚ್ಚಿದಾನಂದಂ ಜಗತ್ಗುರೂಮ್ ವಾಸುದೇವಮ್ ವಂದೇ ||ಪ|| ಶ್ರೀಲಕುಮಿ ಕರಕಮಲ ಪೂಜಿತ ವಿಮಲ ವಿಕ್ಯಾತನೆ ಬ್ರಹ್ಮಸಮೀರ ನುತ ಗಂಗಜನಕನೆ, ಕೋಟಿ ಸೂರ್ಯರಂತೆ ಕಂಗೊಳಿಸುವ ನಿನ್ನ ಪಾದಕೆ ವಂದನೆ, ಅಭಿವಂದನೆ ||೧|| ಶಂಕಚಕ್ರಗದಪದ್ಮಾಧರನೆ ಜ್ಞಾನಭಕ್ತಿವೈರಾಗ್ಯಮೋಕ್ಷ ಕೊಟ್ಟು ರಕ್ಷಿಸು ಅನಂತನೆ, ಜಗದುದರನೆ ಜಗದಂಬರಮಣನೆ ಜಗದ್ಗುರು ಸನ್ಮತಿಯ ನಿಲ್ಲಿಸೋ ಮಧ್ವದನ ಸದನದಲಿ||೨|| ನಿನ್ನ ಮುಖಾರವಿಂದವ ತೋರೋ, ಭವಪಾಪಂಗಳ ಕಳೆಯೋ ಪಂಕಜಾಕ್ಷನೆ, ಸುಂದರವದನನೆ ಸದಾ ನಿನ್ನಂಘ್ರಿಕಮಲದ ಸ್ಮರಣೆಯ ಕೊಟ್ಟು ಮುಕ್ತಿಪಥವ ತೊರೋ ಸ್ತುತಿರಮಣ ಉಪೇಂದ್ರನೇ||೩|| _________________________________________________________________________

ಗುರುಮಧ್ವರಾಯರಿಗೆ ನಮೋ ಗುರುಮಧ್ವಸಂತತಿಗೆ ನಮೋ ನಮೋ

ಆನಂದತೀರ್ಥರಿಗೆ, ಪೂರ್ಣಪ್ರಜ್ಞರಿಗೆ, ಹಂಸರಾಟರಿಗೆ, ಮಧ್ವಾರಾಯರಿಗೆ, ನಮೋ ನಮೋ ತತ್ವವಾದವ ಸಾರಿ ಇಪ್ಪತ್ತೊಂದು ಕುಭಾಷ್ಯಯಗಳ ತರಿದ ಆನಂದತೀರ್ಥರಿಗೆ ನಮೋ ನಮೋ ||ಪ|| ಹರಿ ಸರ್ವೋತ್ತಮನು ಪರತರನು ಎಂದು ಸಾರಿದ ಗುರು ಆನಂದತೀರ್ಥರಿಗೆ ನಮೋ ನಮೋ ಜಗತ್ ಸತ್ಯ ಎಂದು ಪೇಳಿ ಮಾಯವಾದವ ಓಡಿಸಿದ ಆನಂದತೀರ್ಥರಿಗೆ ನಮೋ ನಮೋ ||೧|| ತತ್ವತಹ ಜಿವೇಶ್ವರ, ಜಡೈಶ್ವರ , ಜೀವ-ಜೀವ, ಜೀವ-ಜಡ, ಜಡ-ಜಡ ಎಂಬ ಪಂಚಭೇಧ ಜಗದೊಳು ಸತ್ಯವು ಎಂದು ಬಾರಿಬಾರಿ ಪೇಳಿದ ಆನಂದತೀರ್ಥರಿಗೆ ನಮೋ ನಮೋ ||೨|| ಜೀವ ಅಸ್ವತಂತ್ರರರು, ನಿತ್ಯ ಹರಿಯ ಅನುಚರರು ಜಗದೊಳು ತಾರತಮ್ಯದಿ ಜೀವಗಣ ಗುಣಕನುಗುಣವಾಗಿ  ನಿಜಸುಖ ಅನುಭವಿಸುವರು ಎಂದು ಸಾರಿದ ಆನಂದತೀರ್ಥರಿಗೆ ನಮೋ ನಮೋ||೩|| ಉಪೇಂದ್ರನನು ವೇದಗಳು ಸದಾ ಸಾರಿದಂತೆ, ಪ್ರತ್ಯಕ್ಷವೇ ಪ್ರಮಾಣ ಎಂದು ಅರಿತು ನಿತ್ಯಾನಂದನಲಿ ಅಮಲವಾದ ಭಕ್ತಿಯು ಸ್ವರೂಪದ ಅರಿವನು ಕೊಡುವುದು ಎಂದು ಸಾರಿದ ಆನಂದತೀರ್ಥರಿಗೆ ನಮೋ ನಮೋ||೪|| ___________________________________________________________________________

ಕೂಗಿದರೂ ಧ್ವನಿಕೇಳದೆ, ಶಿರಬಾಗಿದರೂ ದಯೆ ಬಾರದೆ?

ಶೇಷಷಾಯಿ ಕಾವೇರಿರಂಗ ಎಂದು ನಿನ್ನ ದರುಶನವ ಕೊಡುವೆಯೋ ಕಾದಿಹೇ ನಾನು ಬಲು ಹೀನನಾಗಿ, ರಂಗ ನಿನ್ನ ದರುಶನಕಾಗಿ ||೧|| ಅಂದು ಭೃಗು ಋಷಿಗಳು ವೈಕುಂಠ ಬಾಗಿಲತೆರದು ನಿನ್ನ ದರುಶನ ಪಡೆದರು ಕರಿಮಕರಕೆ ಸಿಕ್ಕಿ ನಾರಾಯಣ ಎಂದು ಕರೆದೊಡನೆ ನಿನ್ನ ದರುಶನ ಕೊಟ್ಟೆ ||೨|| ಅಂದು ಬಾಲಕ ಧೃವರಾಜ ನಿನ್ನ ತಪವಗಯ್ಯೆ ಅಮರ ಧೃವ ಪದವಿಯ ಕೊಟ್ಟೆ ಅಂದು ಕನಕದಾಸರು ಪಾಡಿ ಪೊಗಳಿ ಮೊರೆಯಿಟ್ಟು ನಿನ್ನ ದರುಶನ ಪಡೆದರು ||೩|| ಸಂಸಾರದಲಿ ನೊಂದು, ಎಂದೆಂದಿಗು ನಿನ್ನ ಪಾದವೇಗತಿಯೆಂದೂ ಎರಿಗಿರುವೆ ಬಂಧ ಕಳೆದು, ನಿನ್ನ ದರುಶನ ಕೊಟ್ಟು, ನಿತ್ಯಸುಖವನಿಯೋ  ಉಪೇಂದ್ರನೇ ||೪|| ___________________________________________________________________________

ನಾರಾಯಣನ ನೆನೆಮನವೆ, ನಾರಾಯಣನ ನೆನೆಮನವೆ

ಕೇಶವ ನಾರಾಯಣ ಮಾಧವ ಎನು ಮನವೆ ಸರ್ವಗುಣ ಪರಿಪೂರ್ಣ ನಾರಾಯಣನ ನೆನೆ ||1|| ಗೋವಿಂದ ವಿಷ್ಣು ಮಧುಸೂಧನ ಎನು ಮನವೆ ಸಚ್ಚಿದಾನಂದ ರೂಪ ನಾರಾಯಣನ ನೆನೆ ||2|| ತ್ರಿವಿಕ್ರಮ ವಾಮನ ಶ್ರೀಧರ ಎನು ಮನವೆ ಸರ್ವಶಬ್ಧ ವಾಚ್ಯ ನಾರಾಯಣನ ನೆನೆ ||3|| ಹೃಷೀಕೇಷ ಪದ್ಮನಾಭ ದಾಮೋದರ ಎನು ಮನವೆ ವಿಶ್ವೋದಯಸ್ತಿತಿಲಯ ನಾರಾಯಣನ ನೆನೆ ||4|| ಸಂಕರ್ಷಣ ವಾಸುದೇವ ಪ್ರದ್ಯುಮ್ನ ಎನು ಮನವೆ ಸರ್ವಯತ್ರಸಮರ್ಥ ನಾರಾಯಣನ ನೆನೆ ||5|| ಅನಿರುದ್ಧ ಪುರುಷೋತ್ತಮ ಅಧೋಕ್ಷಜ ಎನು ಮನವೆ ಜ್ಞಾನಪ್ರದಾಯಕ ನಾರಾಯಣನ ನೆನೆ ||6|| ನರಸಿಂಹ ಅಚ್ಯುತ ಜನಾರ್ಧನ ಎನು ಮನವೆ ಸೌಖ್ಯ ಸತ್ಕಾರಣಾಯ ನಾರಾಯಣನ ನೆನೆ ||7|| ಉಪೇಂದ್ರ ಹರಿ ಶ್ರೀ ಕೃಷ್ಣ ಎನು ಮನವೆ ಬ್ರಹ್ಮ-ಸಮೀರಾದಿ ವಂದಿತ ಎನು ಮನವೆ ಸಾರ್ವಕಾಲದೇಶವೇಶದೊಳು ಉಪೇಂದ್ರನ ನೆನೆ ||8|| ___________________________________________________________________________

ಸತ್ಯವಂತರ ಸಂಗವಿರಲು ತೀರ್ಥವೇತಕೆ, ನಿತ್ಯ ಅನ್ನದಾನವಿರಲು ಭಯವು ಏತಕೆ?

ಸಪ್ತನದಿಗಳಲಿ ತನುವ ಮಿಂದರೇನು ಫಲವೋ | ಅರಿಷಡ್ವರ್ಗಗಳ ತ್ಯಜಿಸಿದರೇನು ಫಲವೋ | ಇಂದ್ರಿಯಗಳ ನಿಗ್ರಹಿಸಿದರೇನು ಫಲವೋ |  ಹೀನ ಪಾಪಂಗಳ ಬಿಟ್ಟರೇನು ಫಲವೋ | ದಾನಧರ್ಮ ಮಾಡಿದರೇನು ಫಲವೋ | ಜ್ಞಾನತತ್ವಂಗಳರಿತು ಏನು ಫಲವೋ | ಗುರುಹಿರಿಯರ ಪಾದಕೆರಗಿ ಏನು ಫಲವೋ |  ಶಿಷ್ಟರ ಸಂಗ ಮಾಡಿ ಏನು ಫಲವೋ | ನರಹರಿಯೇ ಸರ್ವೋತ್ತಮನು ಎಂದು ಅರಿತು | ನವವಿಧ ಭಕುತಿಯಿಂದ ಮಾಧವನ ಧ್ಯಾನ ಮಾಡಿ | ಪುಲ್ಲನಾಭನ ಹೆಸರನು ಬಾಯಿಯಲ್ಲಿ ಹೇಳಿ ಕೊಂಡಾಡಿ ನಲಿದರೆ | ಭಕ್ತವತ್ಸಲ ಉಪೇಂದ್ರನು ನಿಜ ಭಕುತರಿಗೆ ವಿರಜಾಸ್ನಾನ ಮಾಡಿಸುವನೋ ತಪ್ಪದೆ || ___________________________________________________________________________

ರಾಘವೇಂದ್ರಗುರುರಾಯರ ಸೇವಿಸಿರೋ, ಸೌಖ್ಯದಿ ಜೀವಿಸಿರೋ

ಶ್ರೀ ಗುರು ರಾಘವೇಂದ್ರರಾಯರ ಸದಾ ಭಜಿಸಿರೋ | ಇಷ್ಟಾರ್ಥ ಕೊಡುವ ಕಾಮಧೇನು ಪಾದಕೆರಗಿರೋ || ತುಂಗಾತೀರನಿವಾಸ ಸುಧೀಂದ್ರ ವರಪುತ್ರರ ಸ್ಮರಿಸಿರೋ | ನರಹರಿಯ ಬಿಡದೆ ಭಜಿಪ ಮುನಿಕುಲೋತ್ತುಂಗನಾ ನೆನಿಯಿರೋ || ಪ್ರಹ್ಲಾದನಾಗಿ ನವವಿಧ ಭಕುತಿಯ ಭೋಧಿಸಿದವರ ಒಲಿಸಿರೋ | ಮಧ್ವಮತವ ಸಾರಿ ಚಂದ್ರಿಕೆಯನು ಕೊಟ್ಟವರ ಹಾಡಿರೋ || ಮೂಲರಾಮರ ಇಚ್ಚೆಯಂತೆ ಭಕ್ತರ ಅಘನಾಶ ಮಾಡುವರ ನೋಡಿರೋ | ಸತ್ಯಧರ್ಮಸಿಂಧು ನಿತ್ಯ ಉಪೇಂದ್ರನ ಪೂಜಿಪರಾ ಸೇವಿಸಿರೋ || ___________________________________________________________________________

ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ

ರಾಮ ನಾಮ ಅತಿ ಸುಂದರ, ಕೃಷ್ಣ ನಾಮ ಅತಿ ಸುಮಧುರ | ರಾಮಕೃಷ್ಣ ಎಂದು ಎನ್ನ ಮನ ನೆನಯಲಿ ಹೇ ನಾರಾಯಣನೇ |ಪ| ಎನ್ನ ಜಿಹ್ವೆಯಲ್ಲಿ ರಾಮನಾಮ ನಲಿಯುವಂತೆ ಮಾಡೋ ಜಾಹ್ನವಿಜನಕ| ಎನ್ನ ಕಿವಿಗಳಲ್ಲಿ ಕೃಷ್ಣನಾಮ ಕೇಳಿಸುವಂತೆ ಮಾಡೋ ಕಂದರ್ಪಜನಕ ||೧|| ಎನ್ನ ಕೈಗಳು ರಾಮನಾಮಕೆ ಚಪ್ಪಾಳೆ ಹೊಡೆಯುವಂತೆ ಮಾಡೋ ಮುಕುಂದನೆ| ಎನ್ನ ಕಾಲ್ಗಳೂ ಕೃಷ್ಣನಾಮಕೆ ಹೆಜ್ಜೆಹಾಕಿ ಕುಣಿಯುವಂತೆ ಮಾಡೋ ಗೋವಿಂದನೆ ||೨|| ಎನ್ನ ನಾಸಿಕವು ರಾಮನಾಮದ ಸುಗಂಧ ಸವಿಯುವಂತೆ ಮಾಡೋ ಅನಿರುದ್ಧನೆ| ಎನ್ನ ನಯನವು ಕೃಷ್ಣನಾಮದ ಸುರೂಪ ನೋಡುವಂತೆ ಮಾಡೋ ಉಪೇಂದ್ರನೇ ||೩|| ___________________________________________________________________________

ಆವ ರೂಪದಿಂದ ನೀನೆನ್ನ ಸಲಹುವಿ ಶ್ರೀವಿಭು ಹಯವದನ

ಚಂದವ ನೋಡಿರೇ ಕಡಗೋಲಪಿಡಿದ ಕೃಷ್ಣ ಮೂರುತಿಯ ವಿಶ್ವೇಶತೀರ್ಥರು ಅರ್ಚಿಸಿದ ಗೋಕುಲನಂದನ ಮೂರುತಿಯ ||ಪ|| ಮತ್ಸ್ಯ ರೂಪ ತಾಳಿ ಮನುಕುಲವ ಸಂರಕ್ಷಿಸಿದ  ಮೂರುತಿಯ ತೇಜಿ ರೂಪ ತಾಳಿ ಹಯಗ್ರೀವಾಸುರನಾ ಛೇದಿಸಿದ ಮೂರುತಿಯ ||೧| ಕೂರ್ಮ ರೂಪ ತಾಳಿ ಮಂಧರಹೊತ್ತು ಸಲಹಿದ ಮೂರುತಿಯ ಧನ್ವಂತ್ರಿ ರೂಪ ತಾಳಿ ಕ್ಷೀರಸಾಗರದಿ ಅಮೃತತಂದ ಮೂರುತಿಯ ||೨|| ಮೋಹಿನಿ ರೂಪ ತಾಳಿ ದಾನವರಿಗೆ ಕಪಟಮಾಡಿದ ಮೂರುತಿಯ ವರಾಹ ರೂಪ ತಾಳಿ ಹಿರಣ್ಯನ ವಧಿಸಿ ಭೂಕಕ್ಷೆಯಲಿಟ್ಟ ಮೂರ್ತಿಯ ||೩|| ನರಮೃಗ ರೂಪ ತಾಳಿ ಕಂಬದಿ ಬಂದು ಪ್ರಹ್ಲಾದಗೆ ಒಲಿದ ಮೂರುತಿಯ ವಟು ರೂಪ ತಾಳಿ ತ್ರಿಭುವನ ಅಳೆದು ಇಂದ್ರಪದವಿ ಕೊಟ್ಟ ಮೂರುತಿಯ ||೪|| ಭಾರ್ಗವ ರೂಪ ತಾಳಿ ಕಾರ್ತಿವೀರ್ಯಾರ್ಜುನನ ಕೊಂದ ಮೂರುತಿಯ ರಾಮ ರೂಪ ತಾಳಿ ಹನುಮನ ಸಲಹಿ ದಶಕಂಠನ ಸದೆಬಡಿದ ಮೂರುತಿಯ ||೫|| ಕೃಷ್ಣ ರೂಪ ತಾಳಿ ಪುರುವಂಶವ ಉದ್ಧರಿಸಿ ಗೀತೆಯ ಕೊಟ್ಟ ಮೂರುತಿಯ ಬುದ್ಧ ರೂಪ ತಾಳಿ ಅಸುರಜನರ ಮೋಹಿಸಿ ಶೂನ್ಯತ್ವ ಬೋಧಿಸಿದ ಮೂರುತಿಯ ||೬|| ಕಲ್ಕಿ ರೂಪ ತಾಳಿ ಶ್ವೇತಾಶ್ವ ಏರಿ ದುರ್ಜನರ ಸಂಹರಿಸಿದಾ ಮೂರುತಿಯ ಉಪೇಂದ್ರ ರೂಪ ತಾಳಿ ಭಕ್ತರ ಅಘಕಳೆದು ಆನಂದ ಕೊಡುವ ಮೂರುತಿಯ ||೭||

ಇತಿ ಉಪೇಂದ್ರನೆಂಬ ನನ್ನಿಂದ ಹರಿವಾಯುಗುರುಗಳ ಪ್ರೇರಣೆಯಿಂದ ರಚಿತವಾದ ಭಗವನ್ನಾಮ ಸಂಕೀರ್ತನೆಯು ಸಂಪೂರ್ಣವಾದುದು

ಶ್ರೀಸೀತಾಸಮೇತಾಮೂಲರಾಮಾರ್ಪಣಮಸ್ತು

I would like to thank my dear friend Sheshadri Rao for providing edit and proof support.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: