Raghavendra Vijaya – Part 1 by Guru Jagannatha Dasaru

ರಾಘವೇಂದ್ರರ ವಿಜಯ

ಕಲಿಯುಗದಲಿ ಪಹ್ಲಾದನ ಅವತಾರರಾದ, ಚಿತ್ತೇ ನಃ ಅಯುಕ್ತಮರ್ಥರಾದ ರಾಯರು; ಶ್ರೀ ರಾಘವೇಂದ್ರ ಪ್ರಭುಗಳು ಬಂದ ಹಿಂದೆಯೇ, ಅವರ ಸಹೊದರಾರ ಶ್ರೀ ಅಹ್ಲಾದರೂ ಕೂಡ ಧರೆಗಿಳಿದರು. ಅವರೇ ಕೌತಾಳದ ಶ್ರೀ ಗುರುಜಗನ್ನಾಥದಾಸರು. ಸ್ವಾಮಿರಾಯನೆಂದು ಜನ್ಮತಾಳಿ, ಪ್ರೌಢಾವಸ್ಥೆಯವರೆಗೂ ಉಢಾಳನಾಗಿದ್ದು, ಹಿರಿಯರೊಬ್ಬರು “ಪ್ರಹ್ಲಾದನ ಹೊಟ್ಟೆಯಲ್ಲಿ ವಿರೋಚನ ಹುಟ್ಟಿದ ಹಾಗೆ ಹುಟ್ಟಿದ್ದೀಯ” ಎಂದು ಖಂಡಿಸೆ, ಅಂದಿನಿಂದಲೇ ತಮ್ಮ ಜನ್ಮ ಕಾರಣವನ್ನರಿತು, ರಾಯರಲ್ಲೇ ಮನಸಿಟ್ಟು, ಕೃಷ್ಣದಾಸರೆಂಬ ಒಬ್ಬರಿಂದ ಶ್ರೀಗುರುಜಗನ್ನಾಥವಿಠಲನೆಂಬೋ ಅಂಕಿತ ಪಡೆದು, ರಾಯರ ಬಗ್ಗೆ ಅಸಂಖ್ಯಾತ ಪದಗಳನ್ನು ರಚಿಸಿದ್ದಾರೆ. ರಾಯರನ್ನು ಎಬ್ಬಿಸುವ ಸುಪ್ರಭಾತದಿಂದ ಮೊದಲ್ಗೊಂಡೂ, ರಾಯರನ್ನು ತೂಗಿ ಹಾಡಿ ಮಲಗಿಸುವ ಹಾಡುಗಳನ್ನು ರಚಿಸಿ ಶ್ರೀರಾಘವೇಂದ್ರ ತೀರ್ಥರ ಬಗ್ಗೆ ಭಕ್ತರು ಭಕ್ತಿಯ ಮಹಾಪೂರವನ್ನೇ ಹರಿಸಲು ಕಾಲುವೆಯಾಗಿ ನಿಂತಿದ್ದಾರೆ. ರಾಯರ ಬಗ್ಗೆ ಇವರ ಅನೇಕ ಕೃತಿಗಳಲ್ಲಿ ಇದು ಮೇರು ಎಂದರೆ ತಪ್ಪಾಗಲಾರದು. ರಾಯರ ಮೂರಾವತಾರಿಗಳು ಎಂದು ತಿಳಿದಿರುವ ನಮಗೆ, ರಾಯರು ಪ್ರಹ್ಲಾದ, ವಿಭೀಷಣ, ಲಕ್ಷ್ಮಣ, ಬಾಹ್ಲೀಕ, ವ್ಯಾಸತೀರ್ಥ, ಮತ್ತು ರಾಘವೇಂದ್ರರೆಂಬೋ ಆರು ಅವತಾರಿಗಳೆಂದು ಸಾರಿದ್ದಾರೆ. ಈ ರಾಘವೇಂದ್ರ ವಿಜಯವೆಂಬೋ ಒಂಬತ್ತು ಸಂಧಿಯ ಹೂರಣವನ್ನು ಬಡಿಸಿರುವ ರೀತಿ-ಭಕ್ತಿಯನ್ನು ನೋಡಿದರೆ ಇವರು ದೈವಾಂಶಸಂಭೂತರೆಂದು ತಿಳಿಯಲು ಯಾವ ಅನುಮಾನವೂ ಉಳಿದಿರುವುದಿಲ್ಲ. ಶ್ರೀನಾರಾಯಣಾಚಾರ್ಯರ ೧೦ ಸರ್ಗದ ಶ್ರೀರಾಘವೇಂದ್ರವಿಜಯಕ್ಕೆ ತಮ್ಮ ಕೃತಿ ಸಮಸಂಖ್ಯೆಯಲ್ಲಿ ಇರಬಾರದೆಂದೇ ಈ ರೀತಿ ೯ ಸಂಧಿಯ ಕೃತಿ ರಚಿಸಿದ್ದಾರೆಂದು ತೋರುತ್ತದೆ. ಮೊದಲನೇ ಸರ್ಗದಲ್ಲಿ, ದಾಸರು ತಾವು ರಾಯರ ಕರುಣೆಯಿಂದಲೇ ಈ ಕ್ರ‍ೃತಿಯನ್ನು ರಚಿಸಿದ್ದು ಎಂದು ಸಾರಿದ್ದಾರೆ. ಈ ಕೃತಿಯನ್ನು ಪಠಿಸಿದರೆ ಗೃಹ, ಹೆಂಡತಿ ಮೊದಲಾದ ಐಹಿಕ ಇಚ್ಚೆಯನ್ನು ಪೂರೈಸುವುದರ ಜೊತೆ, ಒಂದು ಜೀವಿಗೆ ತನ್ಮ ಸಾಫಲ್ಯತೆಗೆ ಕಾರಣವಾದ ಮೋಕ್ಷಫಲವನ್ನೂ ಕೊಡಿಸುತ್ತಾರೆಂದು ದಾಸರು ವರ್ಣಿಸಿದ್ದಾರೆ.

ರಾಘವೇಂದ್ರರ ವಿಜಯ ಪೇಳುವೆ, ರಾಘವೇಂದ್ರರ ಕರುಣ ಬಲದಲಿ
ರಾಘವೇಂದ್ರರ ಭಕುತರಾದರಿದನು ಕೇಳುವುದು ||
ಶ್ರೀರಮಣ ಸಿರಿದೇವಿ ಬೊಮ್ಮ ಸ-
ಮೀರ ವಾಣೀ ಭಾರತೀ ವಿಪ
ನೂರುದಶಮುಖ ಉರಗಭೂಷಣ ರಾಣಿಯರ ಪದಕೆ
ಸಾರಿ ನಮನವ ಮಾಡಿ ಭಕ್ತ್ಯನು
ಸಾರ ಗುರುವರ ರಾಘವೇಂದ್ರರು-
ದಾರ ವಿಜಯವ ಪೇಳ್ವೆ ಸುಜನರು ಕೇಳಿ ಮೋದಿಪದು ||೧||

ಘನ್ನ ಗುಣಗನರನ್ನ ನಿಲಯಾ-
ಪನ್ನಪಾಲ ವಿಶಾಲ ಮಹಿಮಾ
ಎನ್ನ ಯೋಗ್ಯತೆ ತಿಳಿದು ತಿಳಿಸಿದ ತನ್ನ ಮಹಮಹಿಮೆ
ಮುನ್ನ್ನ ಪೇಳೆಲೋ ಎಂದು ಅಭಯವ
ಘನ್ನ ಕೃಪೆಯಲಿ ನೀಡಿ ಕೃತಿಯನು
ಎನ್ನ ಮನದಲಿ ನಿಂತು ಪೇಳೀದ ತೆರದಿ ಪೇಳಿದೆನು ||೨||

ವೇದ-ಶಾಸ್ತ್ರ-ಪುರಾಣ-ಕಥೆಗಳ-
ನೋದಿ ಕೇಳ್ದವನಲ್ಲ ತತ್ವದ
ಹಾದಿ ತಿಳಿದವನಲ್ಲ ಬುಧ ಜನಸಂಗ ಮೊದಲಿಲ್ಲ
ಮೋದ ತೀರ್ಥ ಪದಾಬ್ಜಮಧುಕರ-
ರಾದ ಶ್ರೀ ಗುರು ರಾಘವೇಂದ್ರರ
ಪಾದ ಪದ್ಮಪರಾಗ ಲೇಶದ ಸ್ಪರ್ಶ ಮಾತ್ರದಲಿ ||೩||

ಕೃತಿಯ ಮಾಡುವ ಶಕುತಿ ಪುಟ್ಟಿತು
ಮತಿಯ ಮಾಂದ್ಯವು ತಾನೇ ಪೋಯಿತು
ಯತನವಿಲ್ಲದೆ ಸಕಲ ವೇದಗಳರ್ಥ ತಿಳಿದಿಹದು
ಪತಿತಪಾವನರಾದ ಗುರುಗಳ
ಅತುಳಮಹಿಮೆಯವನಾವ ಬಲ್ಲನು
ಮತಿಮತಾಂವರ ಬುಧರಿಗಸದಳ ನರರ ಪಾಡೇನು ||೪||

ಪರಸು ಸೋಕಲು ಲೋಹ ಹೇಮವು
ಅರಸು ಮುಟ್ಟಲು ದಾಸಿ ರಂಭೆಯು
ಸರಸ ಗುರುಗಳ ಪಾದಧೂಳಿಯ ಸ್ಪರ್ಶಮಾತ್ರದಲಿ
ಪರಮ ಪಾಮರನಾದ ನರನೂ
ಹರನ ತೆರದಲಿ ಜ್ಞಾನಯೈದುವ
ದುರಿತರಾಶಿಯ ದೂರಮಾಡುವ ದುರಿತವನದಾವ ||೫||

ಆವ ಗುರುಗಳ ಪಾದತೋಯದಿ
ದೇವ ನದಿ ಮೊದಲಾದ ತೀರ್ಥಗ-
ಳಾವ ಕಾಲದಲಿಂದ ತಾವೇ ಬೆರೆತು ನಿಂತಿಹವೋ
ಶ್ರೀವರನು ತಾ ಚಕ್ರರೂಪದಿ
ಜೀವರೋತ್ತಮ ಪ್ರಾಣ ದೇವನು
ಸಾವಿರಾಸ್ಯನೆ ರಾಯರೆಂದೂ ಸುರರು ನಿಂತಿಹರೂ ||೬||

ಅಲವ ಬೋಧ ಸುತೀರ್ಥ ಮುನಿಗಳು
ಹಲವು ಕಾಲದಿ ನಿಂತು ಜನರಘ-
ವಳಿದು ಕೀರುತಿಯಿತ್ತು ಲೋಕದಿ ಖ್ಯಾತಿ ಮಾಡಿಹರು
ಸುಲಭ ಸಾಧ್ಯನು ತನ್ನ ಜನರಿಗೆ
ಫಲಗಳೀವನು ಸರ್ವ ಜನರಿಗೆ
ಒಲಿಯನೀತನು ಎಂದಿಗಾದರು ಮಂದಭಾಗ್ಯರಿಗೆ ||೭||

ಈತನೊಲಿಯಲು ಪ್ರಾಣನೊಲಿವನು
ವಾತನೊಲಿಯಲು ಹರಿಯು ಒಲಿವಾ
ಈತ ಸಕಲಕೆ ಮುಖ್ಯಕಾರಣನಾಗಿ ಇರುತಿಪ್ಪ
ಈತನೇ ಬಲವಂತ ಲೋಕದಿ
ಈತನೇ ಮಹಾದಾತ ಜನರಿಗೆ
ಈತನಂಘ್ರಿ ಸರೋಜ ಕಾಮಿತ ಫಲಕೆ ಕಾರಣವು ||೮||

ರಾಯರಂಘ್ರಿಸುತೋಯ ಕಣಗಳು
ಕಾಯದಲಿ ಸಲ್ಲಗ್ನವಾಗಲು
ಹೇಯಕುಷ್ಟಭಗಂಧರಾದಿ ಸಮಸ್ತವ್ಯಾಧಿಗಳು
ಮಾಯ ಮಯಭೂತಾದಿ ಬಾಧವ-
ಪಾಯ ತಾನೇ ಪೊಂಬಪೋಪದ-
ಜೇಯ ತನ್ನಯ ಶಕ್ತಿಯಿಂದಲಿ ಕಾರ್ಯ ಮಾಡುವನು ||೯||

ದೃಷ್ಟಿಯೆಂಬ ಸುವಜ್ರದಿಂದದಿ
ಬೆಟ್ಟದಂತಿಹ ಪಾಪರಾಶಿಯ
ಅಟ್ಟಿಕಳಿಸುವ ದೂರದೇಶಕೆ ದುರಿತಗಜಸಿಂಹ
ಮುಟ್ಟಿ ತನಪದ ಸೇವೆಮಾಡಲು
ಇಷ್ಟ ಕಾಮಿತ ಸಿದ್ಧಿನೀಡುವ
ಕಷ್ಟಕೋತಿಯ ಸುಟ್ಟು ಬಿಡುವನು ಸರ್ವಕಾಲದಲಿ ||೧೦||

ಇಂದು ಸೂರ್ಯಗ್ರಹಣ ಪರ್ವವು
ಬಂದ ಕಾಲದಿ ನೇಮಪೂರ್ವಕ
ಪೊಂದಿದಾಸನದಲಿ ಕುಳೀತಷ್ಟೋತ್ತರಾವರ್ತಿ
ಒಂದೆ ಮನದಲಿ ಮಾಡೆ ಗುರುವರ
ನಂದದಲಿ ಸಕಲಾರ್ಥ ಸಿದ್ಧಿಯ
ತಂದುಕೊಡುವನು ತನ್ನ ಸೇವಕೆ ಜನರ ಸಂತಗಿಗೆ ||೧೧||

ತನಯರಿಲ್ಲದ ಜನಕೆ ಸುತರನು
ಮನಿಯು ಮಾನಿನಿ ವೃತ್ತಿ ಕ್ಷೇತ್ರವು
ಕನಕ ಧನ ಸಂತಾನ ಸಂಪತು ಇನಿತೆ ಫಲಗಳನು
ಜನ ಸಮೂಹಕೆ ಇತ್ತು ತೋಷದಿ
ವಿನಯಪೊರ್ವಕ ಸಲಿಸಿ ಕಾವನು
ಅನುಪಮೋಪಮ ಚರಿತ ಸದ್ಗುಣ ಭರಿತ ಯತಿನಾಥ ||೧೨||

ಶಾಪಾನುಗ್ರಹಶಕ್ತನೊಬ್ಬನು
ಲೋಪವಾಗದು ನುಡಿದ ವಾಕ್ಯವು
ವ್ಯಾಪಕನು ತಾನಾಗಿ ಇಪ್ಪನು ಸರ್ವಕಾಲದಲಿ
ಕೋಪವಿಲ್ಲವೋ ಜ್ಞಾನಮಯ ಸುಖ-
ರೂಪ ಸಂತತ ಸಾಧುವರ್ತಿಯು
ಪಾಪನಾಶಕ ಕವಿಕುಲೋತ್ತಮ ಪುಣ್ಯಮಯ ಕಾಯ ||೧೩||

ಭೂತ ಪ್ರೇತ ಪಿಶಾಚಿ ಯಕ್ಷಿಣಿ
ಭೀತಿ ಬಡಕರ ಭೀತಿ ಬಿಡಿಸೀ
ಮಾತೆಯಂದದಿ ಪೊರೆವ ಸಂತತ ಭೀತಿವರ್ಜಿತನು
ದಾತ ಎನ್ನಯ ಮಾತು ಲಾಲಿಸೋ
ಯತಕೀ ತೆರ ಮಾಡ್ದ್ಯೋ ಗುರುವರ
ಪೋತ ನಾ ನಿನಗಲ್ಲೆ ಯತಿಕುಲನಾಥ ಸರ್ವಜ್ಞ ||೧೪|

ಮಾತ ಪಿತ ಸುತ ಭ್ರಾತ ಬಾಂಧವ
ದೂತ ಸತಿ ಗುರು ನಾಥ ಗತಿ ಮತಿ
ನೀತ ಸಖ ಮುಖವ್ರಾತ ಸಂತತ ಎನಗೆ ನೀನಯ್ಯ
ಭೂತಿದಾಯ ಸರ್ವಲೋಕದಿ
ಖ್ಯಾತ ಗುರುಪವಮಾನ ವಂದಿತ
ದಾತ ಗುರುಜಗನ್ನಾಥವಿಠಲನ ಪ್ರೀತಿ ಪಡೆದಿರುವೆ ||೧೫||

ಇತಿ ಕೌತಾಳದ ಶ್ರೀ ಗುರುಜಗನ್ನಾಥದಾಸರು ರಚಿಸಿದ ಶ್ರೀರಾಘವೇಂದ್ರವಿಜಯದ ಮೊದಲನೆ ಸಂಧಿಯು ಸಂಪೂರ್ಣವಾಯಿತು.
ಶ್ರೀಸೀತಾಸಮೇತ ಶ್ರೀ ಮೂಲರಾಮಚಂದ್ರಾರ್ಪಣಮಸ್ತು. ಶ್ರೀಲಕ್ಷ್ಮೀಸಮೇತ ತಾಂದೋಣೀ ವೆಂಕಟರಮಣಾರ್ಪಣಮಸ್ತು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: