Sri Raghavendra Vijaya – Part 8 by Guru Jagannatha Dasaru

ರಾಘವೇಂದ್ರ ವಿಜಯ – Part 8

ರಾಘವೇಂದ್ರರ ವಿಜಯ ಪೇಳುವೆ
ರಾಘವೇಂದ್ರರ ಕರುನ ಬಲದಲಿ
ರಾಘವೇಂದ್ರರ ಭಕುತರಾದವರಿದನು ಕೇಳುವುದು

ಶರಣು ಶ್ರೀಗುರುರಾಜ ನಿನ್ನಯ
ಚರಣಕಮಲಕೆ ಮೊರೆಯ ಪೊಕ್ಕೆನೊ
ಕರುಣ ಎನ್ನೊಳಗಿರಿಸಿ ಪಾಲಿಸು ಕರುನ ಸಾಗರನೆ
ಕರಣ ಮಾನಿಗಳಾದ ದಿವಿಜರು
ಶರಣು ಪೊಕ್ಕರು ಪೊರೆಯರೆನ್ನನು
ಕರುಣ ನಿಧಿ ನೀನೆಂದು ಬೇಡಿದೆ ಶರನ ವತ್ಸಲನೆ ||೧||

ಪಾಹಿ ಪಂಕಜನಯನ ಪಾವನ
ಪಾಹಿ ಗುಣಗಣನಿಲಯ ಶುಭಕರ
ಪಾಹಿ ಪರಮೋದಾರ ಸಜ್ಜನಪಾಲ ಗಂಭೀರ
ಪಾಹಿ ಚಾರುವಿಚಿತ್ರಚರ್ಯನೆ
ಪಾಹಿ ಕರ್ಮಂಧೀಶ ಸರ್ವದ
ಪಾಹಿ ಜ್ಞಾನ ಸುಭಕ್ತಿದಾಯಕ ಪಾಹಿ ಪರಮಾಪ್ತ ||೨||

ಏನು ಬೇಡಲು ನಿನ್ನ ಬೇಡುವೆ
ಹೀನಮನುಜರ ಕೇಳರಾಲೆನೂ
ದೀನ ಜನರುದ್ಧಾರಿ ಈಪ್ಸಿತದಾನಿ ನೀನೆಂದು
ಸಾನುರಾಗದಿ ನಿನ್ನ ನಂಬಿದೆ
ನೀನೆ ಎನ್ನಭಿಮಾನರಕ್ಷಕ
ನಾನಾ ವಿಧವಿಧದಿಂದ ಕ್ಲೇಶಗಳಿನ್ನು ಬರಲೇನು ||೩||

ಮುಗಿಲು ಪರಿಮಿತ ಕಲ್ಲುಮುರಿದೂ
ಹೆಗಲ ಶಿರದಲಿ ಬೇಳಲೇನೂ
ಹಗಲಿರುಳು ಏಕಾಗಿ ಬೆಂಕಿಯ ಮಳೆಯು ಬರಲೇನು
ಜಗವನಾಳುವ ಧ್ವರಿಯು ಮುನಿದೂ
ನಿಗಡ ಕಾಲಿಗೆ ಹಾಕಲೇನೂ
ಮಿಗಿಲು ದುಖ ತರಂಗ ಥರಥರ ಮೀರಿ ಬರಲೇನು ||೪||

ರಾಘವೇಂದ್ರನೆ ನಿನ್ನ ಕರುಣದ-
ಮೋಘ ವೀಕ್ಷಣಲೇಶ ಎನ್ನಲಿ
ಯೋಗವಾದುದರಿಂದ ಚಿಂತೆಯು ಯಾತಕೆನಗಿನ್ನು
ಯೋಗಿಕುಲ ಶಿರೊರತ್ನ ನೀನಿರೆ
ಜೋಗಿ ಮಾನವಗಣಗಳಿಂದೆನ-
ಗಾಗ್ವ ಕಾರ್ಯಗಳೇನುಯಿಲ್ಲವೂ ನೀನೆ ಸರ್ವಜ್ಞ ||೫||

ಅಮರಶಕ್ವರಿ ಮನೆಯೊಳಿರುತಿರೆ
ಶ್ರಮದಿ ಗೋಮಯ ಹುಡುಕಿ ತರುವರೆ
ಅಮಲತರ ಸುರವೄಕ್ಷ ನೀನೆರೆ ತಿಂತ್ರಿಣೀ ಬಯಕೇ?
ಅಮಿತಮಹಿಮೋಪೇತ ನೀನಿರೆ
ಭ್ರಮಿತರಾಗಿಹ ನರರ ಬೇಡೂದ-
ಪ್ರಮಿತ ವಂದಿತಪಾದಯುಗಳನೆ ನಿನಗೆ ಸಮ್ಮತವೆ ||೬||

ಭೂಪ ನಂದನನೆನಿಸಿ ತಾಕರ-
ದೀಪದೆಣ್ಣಿಗೆ ತಿರುಪೆ ಬೇಡ್ವರೆ
ಆ ಪಯೋನಿಧಿ ತಟದಿ ಸಂತತ ವಾಸವಾಗಿರ್ದು
ಕೂಪಜಲ ತಾ ಬಯಸುವಂದದಿ
ತಾಪ ಮೂರರ ಹಾರಿ ನೀನಿರೆ
ಈಪರೀಪರಿಯಿಂದ ಪರರಿಗೆ ಬೇಡಿಕೊಂಬುದೆ ||೭||

ಬಲ್ಲಿದರಿಗತಿ ಬಲ್ಲಿದನು ನೀ-
ನೆಲ್ಲ ತಿಳಿದವರೊಳಗೆ ತಿಳಿದವ-
ನೆಲ್ಲಿ ಕಾಣೆನೊ ನಿನಗೆ ಸಮಸುರಸಂಘದೊಳಗಿನ್ನು
ಎಲ್ಲಕಾಲದಿ ಪ್ರಾಣಲಕುಮೀ-
ನಲ್ಲ ನಿನ್ನೊಳು ನಿಂತು ಕಾರ್ಯಗ-
ಳೆಲ್ಲ ತಾನೇಮಾಡಿ ಕೀರ್ತಿಯ ನಿನಗೆ ಕೊಡುತಿಪ್ಪ ||೮||

ಏನು ಪುಣ್ಯವೊ ನಿನ್ನ ವಶದಲಿ
ಶ್ರೀನಿವಾಸನು ಸತತಯಿಪ್ಪನು
ನೀನೆ ಲೋಕತ್ರಯದಿ ಧನ್ಯನು ಮಾನ್ಯ ಸುರರಿಂದ
ದೀನರಾಗಿಹ ಭಕುತಜನರಿಗೆ
ನಾನಾಕಾಮಿತ ನೀಡೋಗೋಸುಗ
ತಾನೆ ಸರ್ವಸ್ಥಳದಿ ನಿಂತೂ ಕೊಡುವನಖಿಳಾರ್ಥ ||೯||

ಕ್ಷಾಂತಿ ಗುಣದಲಿ ಶಿವನತೆರ ಶ್ರೀ-
ಕಾಂತ ಸೇವೆಗೆ ಬೊಮ್ಮ ಪೋಲುವ-
ನಂತರಂಗಗಂಭೀರತನದಲಿ ಸಿಂಧುಸಮನೆನಿಪ
ದಾಂತ ಜನರಘಕುಲಕೆ ವರುಣನ
ಕಾಂತೆ ತೆರ ತಾನಿಪ್ಪ ಶಬ್ಧದ್ಯ
ನಂತಪೋಲುವನರ್ಥದಲಿ ಗುರು ರಾಜ್ಯದಲಿ ರಾಮ ||೧೦||

ಆರುಮೊಗನಮರೇಂದ್ರರಾಮರು
ಮೂರಜನ ಸರಿಯಿಲ್ಲ ನಿನಗೇ
ಸಾರಿ ಪೇಳುವೆ ದೋಷಿಗಳು ನಿರ್ದೋಷಿ ನೀನೆಂದು
ಆರುವದನ ವಿಶಾಖನಿಂದ್ರಗೆ
ನೂರು ಕೋಪವು ರಾಮದೇವನು
ಸಾರಧರ್ಮದ ಭಂಗಮಾಡಿದ ದೋಷ ನಿನಗಿಲ್ಲ ||೧೧||

ಸಕಲ ಶಾಖಗಳುಂಟು ನಿನಗೇ
ವಿಕಲ ಕೋಪಗಳಿಲ್ಲವೆಂದಿಗು
ನಿಖಿಳ ಧರ್ಮಾಚಾರ್ಯ ಶುಭತಮಚರ್ಯ ಗುರುವರ್ಯ
ಬಕವಿರೋಧಿಯ ಸಖಗೆ ಮುದ್ಧಿನ
ಭಕುರವರ ನೀನಾದ ಕಾರಣ
ಲಕುಮಿರಮಣನ ಕರುಣ ನಿನ್ನೊಳು ಪೂರ್ಣವಾಗಿದಹದೊ ||೧೨||

ಹರಿಯತೆರದಲಿ ಬಲವಿಶಿಷ್ರ‍್ಟನು
ಹರನ ತೆರದಲಿ ರಾಜಶೇಖರ
ಸರಸಿಜೋದ್ಭವನಂತೆ ಸಂತತ ಚತುರಸದ್ವದನ
ಶರಧಿತೆರದಲನಂತರತ್ನನು
ಸರಸಿರುಹ ಸನ್ಮಿತ್ರನಂದದಿ
ನಿರುತ ನಿರ್ಜಿತದೋಷ ಭಾಸುರಕಾಯ ಗುರುರಾಯ ||೧೩||

ಇಂದ್ರತೆರದಲಿ ಸುರಭಿರಮ್ಯನು
ಚಂದ್ರತೆರದಲಿ ಶ್ರಿತ ಕುವಲಯೋ-
ಪೇಂದ್ರತೆರದಲಿ ನಂದಕದಿ ರಾಜಿತನು ಗುರುರಾಜ
ಮಂದ್ರಗಿರಿತೆರ ಕೂರ್ಮಪೀಠನು
ವೀಂದ್ರನಂದದಲರುಣಗಾತ್ರನು
ಇಂದಿರೇಶನ ತೆರದಿ ಸಂತತ ಚಕ್ರಧರ ಶೋಭಿ ||೧೪||

ಜಿತತಮನು ತಾನೆನಿಪ ಸರ್ವದ
ರತುನವರ ತಾ ಭುವನ ಮಧ್ಯದಿ
ವಿತತ ಧರಿಗಾಧರ ಸಂತತ ಮಂಚಮುಖ ಮೂರ್ತಿ
ನತಸುಪಾಲಕ ಕಶ್ಯಪಾತ್ಮಜ
ಪ್ರಥಿತರಾಜಸುತೇಜಹಾರಕ
ಸತತ ದೂಷಣ ವೈರಿ ಗೋಕುಲಪೋಷ ತಾನೆನಿಪ ||೧೫||

ವಿತತಕಾಂತಿಲಿ ಲಸದಿಗಂಬರ
ಪತಿತ ಕಲಿಕೃತಪಾಪಹಾರಕ
ಸತತ ಹರಿಯವತಾರ ದಶಕವ ತಾಳಿ ತಾನೆಸೆವ
ಕೃತಿಯರಮಣನ ಕರುಣಬಲದಲಿ
ನತಿಪಜನಕಖಿಳಾರ್ಥ ನೀಡುವ
ಮತಿಮತಾಂವರನೆನಿಸಿ ಲೋಕದಿ ಖ್ಯಾತನಾಗಿಪ್ಪ ||೧೬||

ವರವಿಭೂತಿಯ ಧರಿಸಿ ಮೆರೆವನು
ಹರನು ತಾನೇನಲ್ಲ ಸರ್ವದ
ಹರಿನಿವಾಸನು ಎನಿಸಲಾ ಪಾಲ್ಗಡಲುತಾನಲ್ಲ
ಸುರಭಿಸಂಯುತನಾಗಿ ಇರಲೂ
ಮಿರುಪುಗೋಕುಲವಲ್ಲತಾನೂ
ಸುರರಸಂತತಿ ಸಂತತಿರಲೂ ಸ್ವರ್ಗತಾನಲ್ಲ ||೧೭||

ತುರಗ-ಕರಿ-ರಥ-ನರ ಸಮೇತನು
ನರವರೇಶನ ದಳವುಯೆನಿಸನು
ನಿರುತ ಪರಿಮಳ ಸೇವಿಯಾದರು ಭ್ರಮರತಾನಲ್ಲ
ಕರದಿ ದಂಡವ ಪಿಡಿದುಯಿರುವನು
ನಿರಯಪತಿತಾನಲ್ಲವೆಂದಿಗು
ಸುರರಿಗಸದಳವೆನಿಪೊದೀತನ ಚರ್ಯವಾಶ್ಚರ್ಯ ||೧೮||

ಕರದಿ ಪಿಡಿದಿಹ ಗುರುವರೇಣ್ಯನು
ಶರಣ ಶರಣಜಹರಾಭೀಷ್ಟ ಫಲಗಳ
ತ್ವರದಿ ಸಲಿಸುತಲವರ ಭಾರವ ತಾನೆಪೊತ್ತಿಹನು
ಮರೆಯ ಬೇಡವೊ ಕರುಣನಿಧಿಯನು
ಸ್ಮರಣೆ ಮಾಡಲು ಬಂದು ನಿಲ್ಲುವ
ಪರಮ ಪಾವನರೂಪತೋರಿಸಿ ತಾನೆ ಕಾಯ್ದಿಹನೂ ||೧೯||

ಅತಸಿ ಪೂ ನಿಭಗಾತ್ರ ಸರ್ವದ
ಸ್ಮಿತಸುನೀರಜನೇತ್ರ ಮಂಗಳ
ಸ್ಮಿತಯುತಾಂಬುಜವದನ ಶುಭತಮರದನ ಜಿತಮದನ
ಅತುಲ ತುಳಸಿಯ ಮೂಲಕಂಧರ
ನತಿಪಜನತತಿಲೋಲ ಕಾಮದ
ಪತಿತ-ಪಾವನ-ಚರಣ ಶರಣಾಂಭರಣ ಗುರುಕರುಣಾ ||೨೦||

ಚಂದ್ರಮಂಡಲವದನ ನಗೆ ನವ-
ಚಂದ್ರಿಕೆಯತೆರ ಮೆರೆಯಾ ಮೇಣ್ ಘನ-
ಚಂದ್ರತಿಲಕದ ರಾಗ ಮನದನುರಾಗ ಸೂಚಿಪದೂ
ಇಂದ್ರನೀಲದ ಮಣಿಯ ಮೀರುವ
ಸಾಂದ್ರದೇಹದ ಕಾಂತಿ ಜನನಯ-
ನೇಂದ್ರಿಯದ್ವಯ ಘಟಿತ ಪಾತಕತರಿದು ರಕ್ಷಿಪುದು ||೨೧||

ಶರಣ ಜನಪಾಪೌಘನಾಶನ
ಶರಣ ನೀರಜ ಸೂರ್ಯಸನ್ನಿಭ
ಶರಣಕುವಲಚಂದ್ರ ಸದ್ಗುಣಸಾಂದ್ರ ರಾಜೇಂದ್ರ
ಶರಣಸಂಘಚಕೋರ ಚಂದ್ರಿಕ
ಶರಣ ಜನಮಂದಾರ ಶಾಶ್ವತ
ಶರಣಪಾಲಕ ಚರಣಯುಗವಾಶ್ರಯಿಸಿ ಬಾಳುವೆನೂ ||೨೨||

ಪಾತಕಾದ್ರಿಗೆ ಕುಲಿಶನೆನಿಸುವ
ಪಾತಕಾಂಬುಧಿ ಕುಂಭಸಂಭವ
ಪಾತಕಾವಳಿ ವ್ಯಾಳವೀಂದ್ರನು ದುರಿತಗಜಸಿಂಹ
ಪಾತಕಾಭಿಧತಿಮಿರಸೂರ್ಯನು
ಪಾತಕಾಂಬುದವಾತ ಗುರು ಜಗ-
ನ್ನಾಥವಿಠಲಗೆ ಪ್ರೀತಿಪುತ್ರನು ನೀನೆ ಮಹಾರಾಯ

ಇತಿ ಕೌತಾಳದ ಶ್ರೀ ಗುರುಜಗನ್ನಾಥದಾಸರು ರಚಿಸಿದ ಶ್ರೀರಾಘವೇಂದ್ರವಿಜಯದ ಎಂಟನೆಯ ಸಂಧಿಯು ಸಂಪೂರ್ಣವಾಯಿತು.
ಶ್ರೀಸೀತಾಸಮೇತ ಶ್ರೀ ಮೂಲರಾಮಚಂದ್ರಾರ್ಪಣಮಸ್ತು. ಶ್ರೀಲಕ್ಷ್ಮೀಸಮೇತ ತಾಂದೋಣೀ ವೆಂಕಟರಮಣಾರ್ಪಣಮಸ್ತು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: