ಶ್ರೀಮದ್ವಾದಿರಾಜ ಪೂಜ್ಯಶ್ರೀಚರಣಂ ವಿರಚಿತಂ ಶ್ರೀರಾಮಕವಚಮ್ ||

Sri Rama Kavacham

ಕಪಿಕಟಕಧುರಿಣ ಕಾರ್ಮುಕನ್ಯಸ್ತಬಾಣ: ಕ್ಷಪಿತದಿತಿಜಸೈನ್ಯ: ಕ್ಷತ್ರಿಯೇಷ್ವಗ್ರಗಣ್ಯ: |
ಜಲಧಿರಚಿತಸೇತುರ್ಜಾನಕೀತೋಷಹೇತು: ಪಥಿ ಪಥಿ ಗುಣಸಾಂದ್ರ: ಪಾತು ಮಾಂ ರಾಮಚಂದ್ರ: || ೧ ||

ಕಪಿಸೇನೆಗೆ ಪ್ರಧಾನನಾಯಕನು, ಬಿಲ್ಲಿಗೆ ಬಾಣವನ್ನು ಜೋಡಿಸಿ ಹಿಡಿದಿರುವವನು, ದೈತ್ಯಸೇನೆಯನ್ನು ನಾಶಪಡಿಸಿರುವವನು, ಕ್ಷತ್ರಿಯಶ್ರೇಷ್ಠ , ಸಮುದ್ರದಲ್ಲಿ ಸೇತುನಿರ್ಮಾಣ ಮಾಡಿದವನು, ಸೀತಾದೇವಿಯರಿಗೆ ಸಂತೋಷಪ್ರದನಾದವನು ಮತ್ತು ಗುಣಪೂರ್ಣನೂ ಆದ ಶ್ರೀರಾಮಚಂದ್ರನು ನನ್ನ ಪ್ರಯಾಣದ ಪ್ರತಿಯೊಂದು ಮಾರ್ಗದಲ್ಲಿಯೂ ನನ್ನನ್ನು ಕಾಪಾಡಲಿ.

ಶ್ರೀಮತ್ಕಿರೀಟವಿಭ್ರಾಜಿಶಿರಾ ರಾಮ: ಶಿರೋsವತು |
ಕುಟಿಲಾಲಕಸಂಶೋಭಿಲಲಾಟಾಂತ: ಸುರಾರ್ಥಿತ: || ೨ ||

ಮಾಣಿಕ್ಯಮೌಕ್ತಿಕೋದ್ಭಾಸಿತಿಲಕ: ಸೂರ್ಯವಂಶಜ: |
ಲಲಾಟಂ ಪಾತು ಸುಭ್ರೂರ್ಮೇ ಕೌಸಲ್ಯಾನಂದನೋ ಭ್ರುವೌ || ೩ ||

ಕಾಂತಿಯುಕ್ತವಾದ ಕಿರೀಟದಿಂದ ಶೋಭಿತವಾದ ಶಿರಸ್ಸುಳ್ಳ ರಾಮನು ನನ್ನ ತಲೆಯನ್ನು ರಕ್ಷಿಸಲಿ. ಗುಂಗುರು ಕೂದಲುಗಳಿಂದ ಸುಶೋಭಿತವಾದ ಹಣೆಯ ಕೊನೆಯ ಭಾಗವುಳ್ಳ ದೇವತೆಗಳಿಂದ ಪ್ರಾರ್ಥಿತನಾದ, ಮಾಣಿಕ್ಯ ಮತ್ತು ಮುತ್ತುಗಳಿಂದ ಪ್ರಕಾಶಿಸುವ ತಿಲಕವುಳ್ಳ ಸೂರ್ಯವಂಶಜನಾದ ಶ್ರೀರಾಮನು ನನ್ನ ಹಣೆಯನ್ನು ರಕ್ಷಿಸಲಿ. ಸುಂದರವಾದ ಹುಬ್ಬುಗಳುಳ್ಳ ಕೌಸಲ್ಯಾನಂದನನು ನನ್ನೆರಡು ಹುಬ್ಬುಗಳನ್ನು ರಕ್ಷಿಸಲಿ.

ಧನುರ್ವಿದ್ಯಾಪಾರದೃಶ್ವಾ ನೇತ್ರೇ ಪಾತ್ವಬ್ಜಲೋಚನ: |
ಲಸನ್ನಾಸಾಪುಟೋ ನಾಸಾಂ ವಿಶ್ವಾಮಿತ್ರವೃತೋsವತು || ೪ ||

ಧನುರ್ವಿದ್ಯೆಯಲ್ಲಿ ಪಾರಂಗತನಾದ, ಕಮಲಲೋಚನನಾದ ಶ್ರೀರಾಮನು ನನ್ನೆರಡು ಕಣ್ಣುಗಳನ್ನು ಕಾಪಾಡಲಿ. ವಿಶ್ವಾಮಿತ್ರರಿಂದ ಸ್ವೀಕೃತನಾದ ಶೋಭಿಸುತ್ತಿರುವ ನಾಸಾಪುಟವುಳ್ಳ ಶ್ರೀರಾಮನು ನನ್ನ ಮೂಗನ್ನು ಕಾಪಾಡಲಿ.

ಬಿಂಬೋಷ್ಠೋsವ್ಯಾನ್ಮದೀಯೌಷ್ಠೌ ಶಂಭುಕಾರ್ಮುಕಭಂಜನ: |
ಕುಂದಕೋಶಲಸದ್ದಂತೋ ದಂತಾನ್ಮೇ ಜಾನಕೀಪತಿ: || ೫ ||

ರುದ್ರದೇವರ ಧನಸ್ಸನ್ನು ಮುರಿದಿರುವ, ತೊಂಡೆಹಣ್ಣಿನಂತಹ ತುಟಿಯುಳ್ಳ ಶ್ರೀರಾಮನು ನನ್ನ ಎರಡು ತುಟಿಗಳನ್ನು ಕಾಪಾಡಲಿ. ಮಾಗಿಮಲ್ಲಿಗೆ ಮೊಗ್ಗಿನಂತೆ ಶೋಭಿಸುತ್ತಿರುವ ಹಲ್ಲುಳ್ಳ ಜಾನಕೀಪತಿಯು ನನ್ನ ಹಲ್ಲುಗಳನ್ನು ಕಾಪಾಡಲಿ.

ಮನೋಜ್ಞರಸನೋ ಜಿಹ್ವಾಂ ಪಾತು ಲೋಕಮಯಾಂತಕೃತ್ |
ವಾಚಾಂ ವ್ಯಾಖ್ಯಾವಿದಗ್ಧೋsವ್ಯಾತ್ತ್ಯಕ್ತಸಾಮ್ರಾಜ್ಯಸಂಭ್ರಮ: || ೬ ||

ಪರಶುರಾಮನಲ್ಲಿ ಸೇರಿದ ಲೋಕಮಯರಾಕ್ಷಸರನ್ನು ಸಂಹಾರ ಮಾಡಿರುವ,  ಮನೋಹರವಾದ ನಾಲಿಗೆಯುಳ್ಳ ಶ್ರೀರಾಮನು ನನ್ನ ನಾಲಿಗೆಯನ್ನು ಕಾಪಾಡಲಿ. ಸಾಮ್ರಾಜ್ಯ ವೈಭವವನ್ನು ಬಿಟ್ಟಿರುವ ಉಪನ್ಯಾಸ ವಿಶಾರದನಾದ ಶ್ರೀರಾಮಚಂದ್ರನು ನನ್ನ ಮಾತನ್ನು ಕಾಪಾಡಲಿ.

ಆಸ್ಯಂ ಚಂದ್ರೋಪಮಾಸ್ಯೋsವ್ಯಾದ್ರಾಮಚಂದ್ರೋ ವನೇಚರ: |
ಕಂಬುಗ್ರೀವೋsವತು ಗ್ರೀವಾಂ ಖರದೂಷಣಸೈನ್ಯಜಿತ್ || ೭ ||

ವನಚಾರಿಯಾದ ಮತ್ತು ಚಂದ್ರನಂತೆ ಮುಖವುಳ್ಳ ಶ್ರೀರಾಮಚಂದ್ರನು ಮುಖವನ್ನು ಕಾಪಾಡಲಿ. ಖರದೂಷಣರ ಸೈನ್ಯವನ್ನು ಜಯಿಸಿದ,  ಶಂಖದಂತಹ ಕುತ್ತಿಗೆಯುಳ್ಳ ಶ್ರೀರಾಮಚಂದ್ರನು ನಮ್ಮ ಕತ್ತನ್ನು ಕಾಪಾಡಲಿ.

ಚಾರುದೀರ್ಘಕರ: ಪಾಣೀ ಮಾರೀಚಮೃಗಲುಬ್ಧಕ: |ಕಂಕಣಾಂಗದಮುದ್ರಾಢ್ಯೋsಂಗುಲೀಸ್ತ್ಯಕ್ತಪ್ರಿಯಾಕೃತಿ: || ೮ ||

ಮಾಯಾಮೃಗರೂಪನಾದ ಮಾರೀಚನೆಂಬ ಮೃಗವನ್ನು ಬೇಟೆಯಾಡುವ ಬೇಟೆಗಾರನಾದ,  ಸುಂದರವಾದ ಉದ್ಧವಾದ ಕೈಗಳುಳ್ಳ ಶ್ರೀರಾಮನು ನನ್ನ ಕೈಗಳನ್ನು ಕಾಪಾಡಲಿ. ಪ್ರಿಯರಾದ ಸೀತೆಯರ ಆಕೃತಿಯನ್ನು ತ್ಯಜಿಸಿರುವ ಬಳೆ, ತೋಳ್ಬಳೆ ಉಂಗುರಗಳಿಂದ ಶ್ರೀಮಂತನಾದ.

ಪಾತು ಪೀನಾಂಸಯುಗ್ಮೋsಸೌ ಹನೂಮನ್ನಯನೋತ್ಸವ: |
ಹಾರಕೌಸ್ತುಭಭೃತ್ಕಂಠಮೂಲಂ ಸುಗ್ರೀವಸಖ್ಯಕೃತ್ || ೯ ||

ಪುಷ್ಟವಾದ ಎರಡು ಹೆಗಲುಗಳುಳ್ಳ ,  ಹನುಮಂತದೇವರ  ಕಣ್ಮನಗಳಿಗೆ ಆನಂದಕರನಾದ ಶ್ರೀರಾಮಚಂದ್ರನು ನನ್ನ ಬೆರಳುಗಳನ್ನು ಕಾಪಾಡಲಿ. ಹಾರವನ್ನು, , ಕೌಸ್ತುಭವನ್ನೂ  ಧರಿಸಿರುವ,  ಸುಗ್ರೀವನೊಡನೆ ಸ್ನೇಹವನ್ನು ಮಾಡಿರುವ ಶ್ರೀರಾಮಚಂದ್ರನು ನನ್ನ ಕುತ್ತಿಗೆಯ ಬುಡವನ್ನು ಕಾಪಾಡಲಿ.

ಉರ: ಪಾತು ಮಹೋರಸ್ಕ: ತಾಲಾತ್ಮಾಸುರಖಂಡನ: |
ಮಧ್ಯಂ ಕೃಶಲಸನ್ಮಧ್ಯ: ಪಾತು ವಾಲ್ಯಂಗಭೇದನ: || ೧೦ ||

ಅಸುರ ರೂಪಿಗಳಾದ ತಾಳವೃಕ್ಷಗಳನ್ನು ಖಂಡಿಸಿದ, ವಿಶಾಲವಾದ ಉರಸ್ಥವುಳ್ಳ (ಎದೆ) ರಾಮಚಂದ್ರನು ಎದೆಯನ್ನು ಕಾಪಾಡಲಿ. ವಾಲಿಯ ಎದೆಯನ್ನು ಸೀಳಿದ, ಕೃಶವಾಗಿ ಶೋಭಿಸುವ ಮಧ್ಯಪ್ರದೇಶವುಳ್ಳ ಶ್ರೀರಾಮಚಂದ್ರನು ನನ್ನ ಮಧ್ಯಪ್ರದೇಶವನ್ನು (ಸೊಂಟ) ಕಾಪಾಡಲಿ.

ದರ್ಭಶಾಯೀ ವಿಭು: ಪಾತು ವಲೀಸ್ತ್ರಿವಲಿಪಲ್ಲವ: |
ತನೂದರ: ಪಾತು ಕುಕ್ಷಿಂ ಕೃತಸೇತುರ್ಮಹಾರ್ಣವೇ || ೧೧ ||

ಚಿಗುರೆಲೆಯಂತೆ ತ್ರಿವಳಿಯುಳ್ಳ , ದರ್ಭಶಾಯಿಯಾದ,  ಸ್ವಾಮಿಯಾದ ಶ್ರೀರಾಮನು ತ್ರಿವಳಿಗಳನ್ನು ಕಾಪಾಡಲಿ. (ನಾಭಿಯ ಮೇಲಿನ ಪ್ರದೇಶದಲ್ಲಿ ಕಾಣಿಸುವ ಮೂರು ಚರ್ಮದ ಸುಕ್ಕು = ಪದರಕ್ಕೆ ತ್ರಿವಳಿ ಎಂದು ಹೆಸರು). ಮಹೋದಧಿಯಲ್ಲಿ ಸೇತುವೆಯನ್ನು ಕಟ್ಟಿರುವ ಶ್ರೀರಾಮನು ಕುಕ್ಷಿಯನ್ನು ಕಾಪಾಡಲಿ.

ನಿಮ್ಮನಾಭಿ: ಪ್ರಭು: ಪಾತು ನಾಭಿಂ ಕಪಿಚಮೂಪತಿ: |
ಪೀತಾಂಬರ: ಸ್ಫುರತ್ಕಾಂಚೀದ್ಯೋತಮಾನಕಟಿದ್ವಯ: || ೧೨ ||

ಲಂಕಾಪ್ರಾಕಾರನಿರ್ಭೇದೀ ರಾಮ: ಪಾತು ಕಟಿಂ ಮಮ |
ಊರೂ ಕರಿಕರೋರುರ್ಮೇ ಚಾರುಬಾಣಧನುರ್ಧರ: || ೧೩ ||

ಕಪಿಸೇನಾಪತಿಯಾದ,  ಆಳವಾದ ಹೊಕ್ಕುಳುಳ್ಳ  ಪ್ರಭುವು ನಾಭಿಯನ್ನು ಕಾಪಾಡಲಿ. ಶೋಭಿಸುತ್ತಿರುವ ಒಡ್ಯಾಣದಿಂದ ಪ್ರಕಾಶಿತವಾದ ಎರಡು ಕಟಿಗಳುಳ್ಳ ಪೀತಾಂಬರಧಾರಿಯಾದ, ಲಂಕೆಯ ಪ್ರಾಕಾರವನ್ನು ಭೇದಿಸಿರುವ ರಾಮನು ನನ್ನ ಕಟಿಯನ್ನು ಕಾಪಾಡಲಿ. ಆನೆಯ ಸೊಂಡಿಲಿನಂತೆ ತೊಡೆಗಳುಳ್ಳ , ಮನೋಹರವಾದ ಬಿಲ್ಲುಬಾಣ ಧರಿಸಿರುವ ಶ್ರೀರಾಮನು ನನ್ನ ಎರಡು ತೊಡೆಗಳನ್ನು ಕಾಪಾಡಲಿ.

ಜೃಂಭಿರಾವಣಸೈನ್ಯಾಬ್ಧಿಕುಂಭಸಂಭವಕೋಟಿಧೂ: |
ಜಾನುನೀ ವೃತ್ತವಿಲಸಜ್ಜಾನುಯುಗ್ಮೋಮಮಾವತು || ೧೪ ||

ಮತ್ತೂ ಮತ್ತೂ (ಉಕ್ಕುತ್ತಿರುವ) ಹೆಚ್ಚುತ್ತಿರುವ ರಾವಣನ ಸೈನ್ಯವೆಂಬ ಸಮುದ್ರಕ್ಕೆ ಕುಂಭಸಂಭವರಾದ ಕೋಟಿ ಅಗಸ್ತ್ಯರ ಹಿರಿಮೆಯನ್ನು ಹೊಂದಿರುವ (ಅಗಸ್ತ್ಯರು ಸಮುದ್ರಪಾನ ಮಾಡಿದಂತೆ ರಾವಣನ ಸೈನ್ಯಸಾಗರವನ್ನು ಒಣಗಿಸಿದವನು),  ದುಂಡಗಿರುವ ಶೋಭಾಯಮಾನವಾದ ಎರಡು ಮೊಣಗಂಟುಗಳುಳ್ಳ ಶ್ರೀರಾಮನು ನನ್ನೆರಡು ಮೊಣಗಂಟುಗಳನ್ನು ಕಾಪಾಡಲಿ.

ಕುಂಭಕರ್ಣಾದಿನಿರ್ಭಂಗದಂಭೋಲೀಸಮಸಾಯಕ: |
ಜಂಘೇ ತುಂಗೇಭದಂತಾಭಜಂಘಾಯುಗ್ಮೋsವತು ಪ್ರಭು: || ೧೫ ||

ಕುಂಭಕರ್ಣ ಮೊದಲಾದವರನ್ನು ಭಂಗಗೊಳಿಸುವ ವಿಷಯದಲ್ಲಿ ವಜ್ರಾಯುಧಕ್ಕೆ ಸಮನಾದ ಬಾಣವುಳ್ಳ , ಎತ್ತರವಾದ ಮಹಾಗಜದ ಎರಡು ದಂತಗಳಂತಿರುವ, ಎರಡು ಜಂಘೆಗಳುಳ್ಳ (ಕಣಕಾಲು) ಸ್ವಾಮಿಯು ನನ್ನ ಎರಡು ಜಂಘೆಗಳನ್ನು ಕಾಪಾಡಲಿ.

ದಶಾನನಶಿರೋsರಣ್ಯಪರಶ್ವಧಪರಾಕ್ರಮ: |
ಮುಕ್ತಾಂಕುರಸಮಶ್ರೀ ಮದ್ಗುಲ್ಫೋ ಗುಲ್ಫೌ ಮಾಮವತು || ೧೬ ||

ರಾವಣನ ಶಿರಸ್ಸುಗಳೆಂಬ ಕಾಡಿಗೆ ಕೊಡಲಿಯ ಸಮವಾದ ಪರಾಕ್ರಮವುಳ್ಳ , ಮುತ್ತಿನ ಮೊಳಕೆಗೆ ಸಮನಾದ ಕಾಂತಿಯುಳ್ಳ ಕಾಲ್ಗಂಟುಳ್ಳ  ಶ್ರೀರಾಮನು ನನ್ನೆರಡು ಕಾಲ್ಗಂಟುಗಳನ್ನು ಕಾಪಾಡಲಿ.

ಸಸಂಭ್ರಮಸುರಶ್ರೇಣೀಶರೋಜುಷ್ಟಾಂಘ್ರಿಪಲ್ಲವ: |
ಪಾದೌ ರಕ್ಷತು ಮೇ ನಿತ್ಯಂ ವಿಭೀಷಣಪದಪ್ರದ: || ೧೭ ||

ದೇವತೆಗಳು ಸಂತೋಷದಿಂದ ವೇಗವಾಗಿ ಸಾಲು ಸಾಲಾಗಿ ಬಂದು ಶ್ರೀರಾಮಚಂದ್ರನ ಚಿಗುರೆಲೆಯಂತಹ ಕಾಲುಗಳನ್ನು ಸೇವಿಸುತ್ತಿದ್ದಾರೆ. ವಿಭೀಷಣನಿಗೆ ಸಾಮ್ರಾಜ್ಯ ಪದವಿಯನ್ನು ಕೊಟ್ಟಿರುವ ಇಂತಹ ಶ್ರೀರಾಮನು ನನ್ನ ಪಾದಗಳನ್ನು ಕಾಪಾಡಲಿ.

ನಖಾನ್ ಪಾತು ನಖಶ್ರೇಣೀಶಶಿದ್ಯೋತಿತದಿಙ್ಮುಖ: |
ಅಗ್ನಿಜ್ವಾಲೋದಿತಸ್ವೀಯಸೀತೋ ವೀತಚ್ಛಿದಾಕೃತಿ: || ೧೮ ||

ಉಗುರುಗಳ ಸಾಲುಗಳೆಂಬ ಚಂದ್ರನಿಂದ ಪ್ರಕಾಶಗೊಳಿಸಲ್ಪಟ್ಟ ದಿಕ್ ಪ್ರದೇಶವುಳ್ಳ (ಉಗುರುಗಳು  ಚಂದ್ರನಂತೆ ಪ್ರಕಾಶಿಸುತ್ತಿವೆ). ಅಗ್ನಿಜ್ವಾಲೆಯನ್ನು ಭೇದಿಸಿ ಹೊರಗೆ ಬಂದಿರುವ ತನ್ನವರಾದ ಸೀತೆಯುಳ್ಳ , ಮೂಲರೂಪದ ಭೇದವಿಲ್ಲದಿರುವ ಆಕೃತಿಯ ಶ್ರೀರಾಮಚಂದ್ರನು ನನ್ನ ಉಗುರುಗಳನ್ನು ಕಾಪಾಡಲಿ‌.

ರಕ್ತಪಾದತಲಾದಿತ್ಯ: ಪಾತು ಪಾದತಲೇ ಮಮ |
ಪ್ರಾಪ್ತಾಯೋಧ್ಯಾಪುರೈಶ್ವರ್ಯ: ಪ್ರಾಚ್ಯಾಂ ಪಾತು ಮನೋರಮ: || ೧೯ ||

ಕೆಂಪಾದ ಪಾದತಳವೆಂಬ ಸೂರ್ಯನುಳ್ಳ ಶ್ರೀರಾಮನು ನನ್ನ ಅಂಗಾಲುಗಳನ್ನು ಕಾಪಾಡಲಿ. ಅಯೋಧ್ಯಾಪಟ್ಟಣದ ರಾಜ್ಯೈಶ್ವರ್ಯವನ್ನು ಪಡೆದ ಸುಂದರಾಂಗನಾದ ಶ್ರೀರಾಮನು ನನ್ನನ್ನು ಪೂರ್ವದಿಕ್ಕಿನಲ್ಲಿ ಕಾಪಾಡಲಿ.

ಧರ್ಮಪ್ರವರ್ತಕ: ಪಾಯಾದವಾಚ್ಯಾಂ ನೀರದದ್ಯುತಿ: |
ಪಾತು ಪ್ರತೀಚ್ಯಾಂ ಯಜ್ವೀಂದ್ರೋ ಹನೂಮತ್ಪಾರಮೇಷ್ಠ್ಯದ: || ೨೦ ||

ಧರ್ಮಪ್ರವರ್ತಕನಾದ, ಮೋಡದಂತಹ ಕಾಂತಿಯುಳ್ಳ ಶ್ರೀರಾಮಚಂದ್ರನು ದಕ್ಷಿಣದಲ್ಲಿ ಕಾಪಾಡಲಿ. ಯಾಗ ಕರ್ತೃಗಳಲ್ಲಿ ಶ್ರೇಷ್ಠನಾದವನು ಮತ್ತು ಹನುಮಂತದೇವರಿಗೆ  ಬ್ರಹ್ಮಪದವಿಯನ್ನು ಕೊಟ್ಟಿರುವ ಶ್ರೀರಾಮಚಂದ್ರನು ಪಶ್ಚಿಮದಲ್ಲಿ ಕಾಪಾಡಲಿ.

ಉದೀಚ್ಯಾಮುದ್ಗತಾಯೋಗವಿದೇಹತನಯಾಪ್ರಿಯ: |
ಅಧೋsಧ:ಕೃತಪಾಪೌಘ: ಪಾತು ರಾಮೋsಖಿಲಾಗ್ರಣೀ: || ೨೧ ||

ತನ್ನಿಂದ ವಿಯೋಗರಹಿತರಾದ ಶ್ರೀಸೀತಾದೇವಿಯರಿಗೆ ಪ್ರಿಯನಾದ ಶ್ರೀರಾಮಚಂದ್ರನು ಉತ್ತರದಿಕ್ಕಿನಲ್ಲಿ ಕಾಪಾಡಲಿ. ಭಕ್ತರ ಪಾಪಸಮೂಹವನ್ನೆಲ್ಲಾ ದೂರಮಾಡಿ (ಕೆಳಗೆ ತಳ್ಳಿರುವ),  ಸರ್ವೋತ್ತಮನಾದ ರಾಮನು ಕೆಳಗಿನ ಭಾಗದಲ್ಲಿ ಕಾಪಾಡಲಿ.

ಊರ್ಧ್ವಮುನ್ನೀತಸಜ್ಜೀವನಾನಾಸಂಘಸುಖಪ್ರದ: |
ಯ ಇದಂ ರಘುನಾಥಸ್ಯ ಕವಚಂ ಬಿಭೃಯಾನ್ನರ: || ೨೨ ||

ಯತಿನಾ ವಾದಿರಾಜೇನ ರಚಿತಂ ನಿರ್ಮಲಂ ದೃಢಮ್ |
ಸ್ಪ್ರಷ್ಟುಂ ತಂ ನೈವ ರಾಕ್ಷಾಂಸಿ ಪಾಪಾನಿ ರಿಪವೋsಪಿ ವಾ || ೨೩ ||

ಊರ್ಧ್ವಲೋಕಕ್ಕೆ ಕರೆದುಕೊಂಡು ಹೋಗಿರುವ ನಾನಾ ಜೀವಸಮೂಹಕ್ಕೆ ಸುಖಪ್ರದನಾದ ಶ್ರೀರಾಮಚಂದ್ರನು ಊರ್ಧ್ವಪ್ರದೇಶದಲ್ಲಿ ಕಾಪಾಡಲಿ.

ಯಾವ ಮನುಷ್ಯನು ಗುರುವಾದಿರಾಜ ಯತಿಗಳಿಂದ ರಚಿತವಾದ,  ನಿರ್ಮಲವಾದ, ದೃಢವಾದ ರಘುನಾಥನ ಈ ಕವಚವನ್ನು ಧರಿಸಿರುತ್ತಾನೋ, ಅವನನ್ನು ರಾಕ್ಷಸರೂ, ಪಾಪಗಳೂ ಅಥವಾ ಶತ್ರುಗಳಾಗಲಿ ಮುಟ್ಟುವುದಕ್ಕೆ ಸಮರ್ಥರಾಗುವುದಿಲ್ಲ.

ವಿಪದೋ ವ್ಯಾಧಯೋ ವಾsಪಿ ಶಕ್ನುವಂತಿ ಶರೋಪಮಾ: |
ಅರಿಂ ಜಿತ್ವಾ ತು ಸಂಸಾರಂ ಯಾಸ್ಯತ್ಯಂತೇsಪುನರ್ಭವಮ್ || ೨೪ ||

ವಿಪತ್ತುಗಳೂ ಅಥವಾ ಬಾಣಗಳಂತೆ ಹಿಂಸಕವಾದ ರೋಗಗಳಾಗಲಿ ಈ ಕವಚವನ್ನು ಧರಿಸುವನನ್ನು ಸ್ಪರ್ಶಿಸಲಾರವು. ಈ ಕವಚವನ್ನು ಮನಸ್ಸಿನಲ್ಲಿ ಧರಿಸುವ ಮಾನವನು ಶತ್ರುವನ್ನು ಜಯಿಸಿ ಸಂಸಾರವನ್ನು ದಾಟಿ ಪುನರಾವೃತ್ತಿರಹಿತವಾದ ಮೋಕ್ಷವನ್ನು ಪಡೆಯುತ್ತಾನೆ.

|| ಇತಿ ಶ್ರೀಮದ್ವಾದಿರಾಜ ಪೂಜ್ಯಶ್ರೀಚರಣಂ ವಿರಚಿತಂ ಶ್ರೀರಾಮಕವಚಮ್ ಸಂಪೂರ್ಣಮ್ ||

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: