ಶ್ರೀವ್ಯಾಸರಾಜರ ಭಗವದ್ಗೀತಾಸಾರ

ಕೇಳಯ್ಯ ಎನ್ನ ಮಾತು ಪಾರ್ಥನೆ ಗೀತಾದರ್ಥನೆ ||ಪ||

ಶ್ಲೋಕ |

ಕುರುಕ್ಷೇತ್ರದಿ ಎನ್ನವರು ಪಾಂಡವರು

ಪೇಳೋ ಸಂಜಯಾ ಏನು ಮಾಡುವರು ಕೂಡಿ |

ಕೇಳಯ್ಯ ಅರಸನೆ ನೋಡಿ ಪಾಂಡವರ ಸೇನಾ|

ಮಾತನಾಡಿದ ನಿನ್ನ ಸುತ ದ್ರೋಣಗಿಂತು ||

ಪಲ್ಲವಿ|

ಕೇಳಿ ತಾ ಪಾರ್ಥನು ಕುರು ದಂಡ

ರಣದಲಿ ಚಂಡ | ಗಾಂಡೀವ ಕರದಂಡ

ಅಚ್ಯುತ ಪಿಡಿರಥ ನಡೆ ಮುಂದ

ಬಹು ತ್ವರದಿಂದ | ನೋಡುವೆ ನೇತ್ರದಿಂದ ||

ಗುರುಹಿರಿಯರ ಕೂಡ ಯಾಕೆಂದ

ಯುದ್ಧ ಸಾಕೆಂದ | ಭಿಕ್ಷವೆ ಸುಖವೆಂದ||

ಕುಂತಿಸುತ ಈ ಮಾತು ಉಚಿತಲ್ಲ

ನಿನಗಿದು ಸಲ್ಲ | ಪಿಡಿ ಗಾಂಡೀವ ಬಿಲ್ಲ ||೧||

ಶ್ಲೋಕ|

ಬಾಲ್ಯ ಯೌವನ ಮುಪ್ಪುತನ ದೇಹದಲ್ಲಿ

ಇಂಥ ದೇಹಕೆ ಮೋಹ ಮತ್ತ್ಯಾಕಿಲ್ಲಿ|

ಕಾಯ್ದು ಕೊಲ್ಲುವ ನಾನು ಇರುತಿರಲು ಇಲ್ಲಿ

ಬಿಲ್ಲು ಪಿಡಿದು ಕೀರ್ತಿಪಡೆ ಲೋಕದಲ್ಲಿ ||

ಪಲ್ಲವಿ|

ಶಸ್ತ್ರದಂಜಿಕೆಯಿಲ್ಲ ಜೀವಕ್ಕೆ

ಈ ದೇಹಕ್ಕೆ| ಪಾವಕನ ದಾಹಕ್ಕೆ |

ಉದಕಗಳಿಂದ ವೇದನೆಯಕ್ಕೆ

ಜೀವಕ್ಕ | ಮಾರುತನ ಶೋಷಕ್ಕೆ

ನಿತ್ಯ ಅಭೇದ್ಯ ತಾ ಜೀವನ

ಸನಾತನ| ವಸ್ತ್ರದಾಂಗೆ ಈ ತನವು |

ನನಗಿಲ್ಲಯ್ಯ|ಅದನಾ ಬಲ್ಲೆನಯ್ಯಾ ||೨||

ಶ್ಲೋಕ|

ಜ್ಞಾನ ದೊಡ್ಡದು ಕರ್ಮಬಂಧನವ ಬಿಟ್ಟು

ಕರ್ಮ ಬಿಟ್ಟರೆ ಪ್ರತ್ಯವಾಯವದೆಷ್ಟು |

ಫಲ ಬಿಟ್ಟು ನೀ ಮಾಡು ಸತ್ಕರ್ಮಗಳ

ಸಮ ದೇಹಕೆ ಫಲಕರ್ಮ ಕಾರಣವಲ್ಲ ||

ಪಲ್ಲವಿ |

ಕರ್ಮದಲ್ಲೆ ನಿನಗಧಿಕಾರ

ಫಲ ತಾ ದೂರ| ಧನುಂಜಯಗೋಸ್ಕರ|

ಇತ್ತ ಬಾರಯ್ಯ | ಯೋಗಬುದ್ಧಿ ಮಾಡಯ್ಯ|

ಜಿತ ಬುದ್ಧಿ ಯಾವುದೈ ಕೇಶವ

ಜಗತ್ಪಾಶವ | ನೋಡದೇ ಪರಮೇಶ |

ಗೋವಿಂದನಲಿ ಮನವಿಟ್ಟವ

ಕಾಮ ಬಿಟ್ಟವ ಜಿತ ದೇಹ ತಾನಾದಾ ||೩||

ಶ್ಲೋಕ|

ಜ್ಞಾನ ದೊಡ್ಡದು ಕರ್ಮದಲ್ಲ್ಯಾಕೆ ಎನ್ನ

ಬುದ್ಧಿ ಮೋಹಿಸಿ ಕೃಷ್ಣ ಕೇಳಯ್ಯ ಬಿನ್ನಪ||

ಕರ್ಮವಿಲ್ಲದೆ ಮೋಕ್ಷವುಂಟೆ ಇನ್ನು

ಕರ್ಮ ಮೋಕ್ಷದ ಬುದ್ಧಿಗೆ ಬೀಜವಲ್ಲೆ||

ಪಲ್ಲವಿ |

ಯುದ್ಧ ಕರ್ಮವ ಮಾಡೋ ಪಾಂಡವ

ರಣ ತಾಂಡವ | ವೈರಿ ಷಂಡನೆಂಬುವ|

ಜನರೆಲ್ಲ ಮಾಳ್ಪರೋ ನಿನ್ನ ನೋಡಿ

ಮತ್ತೆನ್ನ ನೋಡಿ | ನೋಡಿದರ ನೀ ಬೇಡಿ |

ಎನಗ್ಯಾಕೆ ಪೇಳಯ್ಯ ಜನಕರ್ಮ

ಕ್ಷತ್ರಿಯ ಧರ್ಮ | ನಷ್ಟವಾಗುವದು ಧರ್ಮ|

ಅರ್ಪಿಸು ಎನ್ನಲ್ಲಿ ಸರ್ವವು

ಬಿಟ್ಟು ಗರ್ವವು | ತಿಳಿ ಎನ್ನೊಳು ಸರ್ವವು ||೪||

ಶ್ಲೋಕ|

ಯೋಗ ಸನ್ಯಾಸ ಎರಡು ಮುಕ್ತಿಗೆ ಧೃಡವು

ಭೋಗವರ್ಜಿತ ಕೀಳು ಸನ್ಯಾಸಿಯಿರವು |

ಹೇಗೆ ಪದ್ಮಕೆ ವಾರಿಯ ಲೇಪವಿಲ್ಲ

ಹಾಗೆ ಭಕ್ತಿಗೆ ಸಂಸೃತಿಯ ಇಲ್ಲ ||

ಪಲ್ಲವಿ |

ಅಜನಲ್ಲಿ ದ್ವಿಜನಲ್ಲಿ ಗಜದಲ್ಲಿ

ಸಮನಾನಲ್ಲಿ| ಭಜಿಪರ ಮನದಲ್ಲಿ

ಮನಸು ಯಾರ ಜೀವಕೆ ಬಂದು

ಇತ್ತ ಬಾರೆಂದು | ಮತ್ತೆ ವೈರಿ ದಾರೆಂದು|

ಲೋಷ್ಟ ಕಾಂಚನ ನೋಡು ಸಮಮಾಡಿ|

ಆಸನ ಹೂಡಿ | ನಾಸಿಕ ತುದಿ ನೋಡಿ|

ಧ್ಯಾನ ಮಾಡು ಹರಿ ಅಲ್ಲಿಹ

ಅವನಲ್ಲಿಹ | ಯೋಗ ಸನ್ನಿಹಿತನವನೇ ||೫||

ಶ್ಲೋಕ|

ಯಾರ ಭಕ್ತಿಯು ಎನ್ನ ಪಾದಾಬ್ಜದಲ್ಲಿ

ಘೋರ ಸಂಸಾರ ಯಾತನೆ ಅವರಿಗೆಲ್ಲಿ|

ಶರೀರವೆ ಕ್ಷೇತ್ರವೆಂತೆಂದು ತಿಳಿಯೋ||

ಪಲ್ಲವಿ | ಶರೀರದೊಳಗಿದ್ದು ಪಾಪಿಲ್ಲ

ದುಃಖಲೇಪಿಲ್ಲ | ಆಕಾಶವು ಎಲ್ಲಾ|

ಮೂರು ಸದ್ಗುಣ |ಕೇಳೈಯ್ಯ ಫಲ್ಗುಣ|

ಸುಖದುಃಖ ಸಮಮಾಡಿ ನೋಡು ನೀ |

ಈಡ್ಯಾಡು ನೀ| ಬ್ರಹ್ಮನ ನೋಡು ನೀ|

ಸೂರ್ಯ ಚಂದ್ರರ ತೇಜ ನನದಯ್ಯ

ಗುಡಾಕೇಶಯ್ಯ| ಅನ್ನ ಪಚನ ನನ್ನದಯ್ಯ ||೬||

ಶ್ಲೋಕ|

ನಾನೇ ಉತ್ತಮ ಮನಸು ಎನ್ನಲ್ಲು ಮಾಡೋ

ಜ್ಞಾನ ಅಜ್ಞಾನ ಪೇಳುವೆ ತಿಳಿದು ನೋಡೋ

ಜ್ಞಾನ ದುರ್ಲಭ ಅವರ ಭಕ್ತಿಗಳಂತೆ

ನಾನು ಕೊಡುವೆನು ಫಲವ ಮನಸು ಬಂದಂತೆ||

ಪಲ್ಲವಿ |

ಸ್ಮರಣೆ ಮಾಡುತ ದೇಹ ಬಿಡುವರೋ

ನನ್ನ ಪಡೆವರೋ | ಬಲು ಭಕ್ತಿ ಮಾಡುವರೋ|

ಅನಂತ ಚೇತನ ಸುಳಿವೆನು

ಹರಿ ಸುಲಭನು | ಮತ್ತೆ ಜನನವಿಲ್ಲವಗೆ|

ಎನ್ನ ಭಕ್ತರಿಗಿಲ್ಲ ನಾಷವು

ಸ್ವರ್ಗದಾಶವು| ಬಿಟ್ಟು ಚರಣ ಭಕುತಿಯ ||೭||

ಶ್ಲೋಕ|

ಕೃಷ್ಣ ತೋರಿಸು ನಿನ್ನ ವಿಭೂತಿ ರೂಪ |

ಇಷ್ಟ ಪೂರ್ತಿಯ ಆಗಲೊ ಎನಗೆ ಶ್ರೀಪ|

ರಾಮ ನಾನಯ್ಯ ರಾಜರ ಗುಂಪಿನಲ್ಲಿ

ಸೋಮ ನಾನಯ್ಯ ರಾಜರ ಗುಂಪಿನಲ್ಲಿ

ಸೋಮ ನಾನಯ್ಯ ತಾರಕ ಮಂಡಲದಲಿ||

ಪಲ್ಲವಿ |

ಅಕ್ಷರದೊಳಗೆ ಅಕಾರನು

ಗುಣಸಾರನು| ಪಕ್ಷಿಗಳಲಿ ನಾನು ಗರುಡನು|

ಸಕಲ ಜಾತಿಗಳಲ್ಲಿ

ಶ್ರೇಷ್ಟತನದಲಿ| ಎನ್ನ ರೂಪ ತಿಳಿಯಲ್ಲಿ|

ತೋರಿಸೋ ಶ್ರೀಕೃಷ್ಣ ನಿನ್ನ ರೂಪ|

ನಾನಾ ರೂಪ| ಅರ್ಜುನ ನೋಡೋ ರೂಪ|

ಕಂಡನು ತನ್ನನು ಸಹಿತದಿ |

ಹರಿ ದೇಹದಿ| ಬ್ರಹ್ಮಾಂಡಗಳಲ್ಲಿ ||೮||

ಶ್ಲೋಕ|

ಕ್ಷರ ಅಕ್ಷರ ಎರಡಕ್ಕೂ ಉತ್ತಮನು ನಾನು|

ಗೋರ ನರಕದ ಲೋಭ ಕಾಮನು ನಾನು |

ಸಾರ ದಾನವು ಸಜ್ಜನರ ಹಸ್ತದಲ್ಲಿ

ಭೂರಿ ದಕ್ಷಿಣೆ ನೀಡೋ ಸತ್ಪಾತ್ರರಲ್ಲಿ ||

ಪಲ್ಲವಿ |

ಸರ್ವ ದಾನದಕಿಂತ ಎನಭಕ್ತಿ

ಕೇಳೊ ಭೂಶಕ್ತಿ | ಮಾಡಯ್ಯ ವರಕ್ತಿ |

ಕೃಷ್ಣ ಹರಣವಾಯ್ತು ನಿನ್ನಿಂದ

ಮೋಹ ಎನ್ನಿಂದ| ಬಹು ಸುವಾಕ್ಯ ದಿಂದ

ಕೃಷ್ಣ ಭೀಮಾನುಜರ ಸಂವಾದ

ಮಹ ಸುಖಪ್ರದ| ಧೃತರಾಷ್ಟ್ರ ಕೇಳಿದ|

ಬಲ್ಲೆನು ವ್ಯಾಸರ ದಯದಿಂದ|

ಮನಸಿನಿಂದ| ಕೃಷ್ಣನಲ್ಲೇ ಜಯವೆಂದ ||೯||

|| ಶ್ರೀ ಕೃಷ್ಣಾರ್ಪಣಮಸ್ತು ||

Advertisements
%d bloggers like this: