ಧರೆಯೋದ್ಧಾರಕ ಮೆರವರು ಗುರುಗಳು ವರಮಂತ್ರಾಲಯದಲ್ಲಿ (dhareyOddhaaraka merevaru gurugalu)

ಧರೆಯೋದ್ಧಾರಕ ಮೆರವರು ಗುರುಗಳು ವರಮಂತ್ರಾಲಯದಲ್ಲಿ
ವರಪ್ರಹ್ಲಾದರು ವ್ಯಾಸ ಪ್ರಭುಗಳು ವರ ತುಂಗಾ ತಟದಲ್ಲಿ |1|

ಕೊರೆದಿಹ ಕಂಬದಿ ಹರಿಯನು ತೋರಿಸಿ ಹರಿನಾಮವ ಜಗದಲ್ಲಿ
ಮೆರಸಿದ ವರಪ್ರಹ್ಲಾದರು ಮೆರವರು ವರಮಂತ್ರಾಲಯದಲ್ಲಿ |2|

ಹರಿಮತ ಸಾರುವ ಹರಿಪದ ಹಾಡುವ ಪರಿ ಪರಿ ವಿಧಪದದಲ್ಲಿ
ಇಳೆಯೊಳು ಸಾರಿದ ವ್ಯಾಸರು ಮೆರೆವರು ವರಮಂತ್ರಾಲಯದಲ್ಲಿ |3|

ಧರಯನು ಮುಸುಕಿದ ತಮವನು ತೆರಯಲು ಹರುಷದಿ ಕಲಿಯುಗದಲ್ಲಿ
ಗುರು ರಾಘವೇಂದ್ರರು ಕರಮೆರೆದಿಹರು ವರಮಂತ್ರಾಲಯದಲ್ಲಿ |4|

ತನುಮನ ಧನಗಳ ಕೊನೆಗಾಣದೆ ಭುವವನ ಚರಿಸುವ ಜನರಲ್ಲಿ
ಮಣಿದೀಪಕ ಮತಿ ಯೆನಿಸಿ ಮೆರೆದರು ವರಮಂತ್ರಲಯದಲ್ಲಿ |5|

ವಿಷಯದ ವಿಷದಿಂದುಸಿರಿಡುತಲಿ ಬಲುದೆಶೆಗೆಡುತಿಹ ಮನದಲ್ಲಿ
ಹೊಸ ಜ್ಯೋತಿಯ ಕರಮೆರೆಯಲು ಮೆರವರು ವರಮಂತ್ರಾಲಯದಲ್ಲಿ |6|

ದಿನ ಸಂಸಾರದ ನೆನದರೆ ಘೋರದ ಘನರಥವೆಡೆತಡೆದಲ್ಲಿ
ಮುನಿ ಮಹರಥಿಯಾಕ್ಷಣ ಬಂದೊಲಿವರು ವರಮಂತ್ರಾಲಯದಲ್ಲಿ |7|

ಭುವಿಯೊಳು ಬಹುಪರಿ ಬಳಲುವ ಮನುಜರ ಬವಣೆಯ ಬಲುತಿಳಿದಿಲ್ಲಿ
ತವಕದಿ ಬಿಡಿಸಲು ಅವತರಿಸಿರುವರು ವರಮಂತ್ರಾಲಯದಲ್ಲಿ |8|

ಕರೆದರೆ ಬರುವರು ಅರಘಳಿಗಿರದಲೆ ಕರಕಶ ಹೃದಯಿಗಳಲ್ಲಾ
ಧರೆಯೊಲು ಗುರುಗಳ ಮೊರೆಯಿಡಲಾರದ ನರರೇ ಪಾಪಿಗಲೆಳಲ್ಲಾ |9|

ಸುರತರು ಫಲಿತಿದೆ ವರಕರು ದೊರೆತಿರೆ ವರಮಂತ್ರಾಲಯದಲ್ಲಿ
ತೆರೆವುದು ಮುಸುಕನು ಸ್ಥಿರವಲ್ಲವುತನು ಪರಸುಖ ಸಾಧನದಲ್ಲಿ |10|

ಉರುತರ ತಪಸು ಸಮಾಧಿಗಳಿಲ್ಲಧೆ ದೊರೆವುದು ಸತ್ಗತಿ ಇಲ್ಲಿ
ಅರಿಯದೆ ವೇದ ಪುರಾಣ ಸುಶಾಸ್ತ್ರವ ದೊರೆವುದು ಸನ್ಮತಿ ಇಲ್ಲಿ |11|

ಮಾಧವ ಮತದಾಂಭೊಧಿಗೆ ಚಂದ್ರರ ದೀಧಿತಿ ತೊಳಗುವುದಿಲ್ಲಿ
ವಾದೀಗಳೆಲ್ಲರ ಮೋದದಿ ಜೈಸಿದ ನಾದವು ಮೊಳಗುವದಿಲ್ಲಿ |12|

ವೆದಾಂತದ ಪೂತೋಟದ ಪರಿಮಲ ಸಾಧಿಸಿ ದೊರೆತಿಹುದಿಲ್ಲಿ
ವೇದವಿಶಾರದ ಸ್ವಾದಿಸಿ ಸುಧೆಯ ವಿನೋದದಿ ರಮಿಸುವಳಿಲ್ಲಿ |13|

ಪಾವನತರ ಮಹಯಾತ್ರಾರ್ಥಿಗಳೋವಿಸಿ ನೆಲೆಸಿಹರಿಲ್ಲಿ
ಭುವಲಯಕೆ ಸಲೆ ಆ ವೈಕುಂಠವು ಧಾವಿಸಿ ಬಂದಿಹುದಿಲ್ಲಿ |14|

ಧನುವಂತರಿಗಳು ತನುದೋರಿರುವರು ಅನುದಿನ ಮನವೊಲಿದಿಲ್ಲಿ
ಘನರೋಗಗಳಿಗೆ ಧನುವೇರಿಸಿ ಆ ಕ್ಷಣದೋಳು ಕಳೆದೊಗೆಯುವರಿಲ್ಲಿ |15|

ಕುಷ್ಟಾದಿಗಳೆಂಬಷ್ಟಾ ದಶಗಳು ಶ್ರೀಷ್ಟಾಲಯದೊಳಗಿಲ್ಲಿ
ನಷ್ಟಾಗುತ ಸಕಲೇಷ್ಟವು ದೊರೆವುದು ಸೃಷ್ಠಾಣ ಕೃಪೆಯಲ್ಲಿ |16|

ಪ್ರೇತ ಪಿಶಾಚಿ ಗ್ರಹಾದಿಗಳೆಲ್ಲವು ಸೋತಿವೆ ಬಲಮುರಿದಿಲ್ಲಿ
ತಾತರ ಮೊರೆಯೊಳು ಯಾತರ ಭಯವಿದೆ ಜ್ಯೊತಿರೆ ಪದಯುಗದಲ್ಲಿ |17|

ಅಂಧರು ಗುರುಗಳ ಸುಂದರ ಮೂರ್ತಿಯ ಕಣ್ ತೆರದು ನೋಡುವರಿಲ್ಲಿ
ವಂಧ್ಯೆರು ಮಗುವಿನ ನಂದನದೊಳು ಆನಂದದಿ ಪಾಡುವರಿಲ್ಲಿ |18|

ಜನುಮದ ಮೂಕರು ಚಿನ್ಮಯ ಮೂರ್ತಿಯ ವಿನುತದಿ ಕೀರ್ತಿಪರಿಲ್ಲಿ
ಘನಮಹ ಬಧಿರರು ಮನದಣಿ ಕೇಳುತ ಮುನಿಗಳ ಪ್ರಾರ್ಥಿಪರಿಲ್ಲಿ |19|

ಯಂತರ ತಂತರನಂತ ಸ್ವತಂತ್ರರ ತಂತ್ರವು ರಾಜಿಪುದಿಲ್ಲಿ
ಅಂತರ ಹೊಳೆ ಗುರುಮಂತರ ಗಾನ ನಿರಂತರ ಸುಖವಿಹುದಿಲ್ಲಿ |20|

ವ್ಯಂಗಕೆ ಸ್ವಂಗವು ಭಂಗಕೆ ಸಿಂಗಾರ ಕಂಗೆಡೆ ಮಂಗಲವಿಲ್ಲಿ
ಕಂಗೊಳಿಪುದು ಸುತರಂಗಿಣಿ ತೀರದಿ ಪುಂಗವರಾಲಯದಲ್ಲಿ |21|

ಭವ ಸಾಗರವನು ದಾಟಿಸೆ ಬಲು ಅನುಭವಿಕರು ನಾವಿಕರಿಲ್ಲಿ
ತವಕದಿ ನಿಂದರೆ ಸರ್ವೆಯುವದೇತಕೆ ಭುವಿಯೊಳು ಬಹುಪರಿಯಲ್ಲಿ |22|

ಸಂತತಿ ಸಂಪದ ಆಯುರಾರೋಗ್ಯವು ನಂದದಿ ದೊರೆಯುವುದಿಲ್ಲಿ
ಚಿಂತಿಪುದೇತಕೆ ಭ್ರಾಂತಿಯೊಳೆಲ್ಲರು ಪಂಥದಿ ಗುರುನಿಂತಲ್ಲಿ |23|

ರಾಜರ ರಾಜರ ಗುರುಮಹರಾಜರ ತೇಜವು ಬಣ್ಣಿಪುದೆಂತು
ರಾಜಿಪ ಶ್ರೀಹರಿ ಪಾದ ಸರೋಜವ ಪೂಜಿಪ ಸಂಪದರಿಂತು |24|

ಅನಘರು ಇವರಾ ಘನತೆಯ ನೆಲೆಯದು ಮನುಜರಿಗರಿಯುವದೆಂತು
ಘನವ್ಯಾಪಕ ಜಗ ಜನಕ ಜನಾರ್ದನ ಅಣಿಯಾಗಿರೆ ಬಲುನಿಂತು |25|

ತುಂಗ ತೀರ ವಿರಾಜರ ಕೀರ್ತಿಯು ಬಂಗಾರದ ಹೊಳೆಯಲ್ಲಿ
ಶೃಂಗಾರದಿ ಹರಿ ಪೆÇಂಗೊಳಲುದುತ ಕಂಗೋಚರಿಸುವರಿಲ್ಲಿ |26|

ಅನಿಮಿಷರೆಲ್ಲರು ಮುನಿಕುಲರೊಂದಿಗೆ ಕುಣಿಯುವರನುನಯದಿಂದಾ
ವನಗೋಪಾಲನ ಘನತೆಯ ಕೀರ್ತಿಸಿ ವಿನುತದಿ ಸಂಬ್ರಮದಿಂದಾ |27|

ಭೂಸುರರೆಲ್ಲರು ಶ್ರೀಶನ ಗುಣಗಳ ಸಾಸಿರ ನಾಮಗಳಿಂದಾ
ಕೇಶವನೊಲಿದನು ತೋಷದಿ ತುತಿಪರು ಸೂಸುವ ಭಾಷ್ಪಗಲಿಂದಾ |28|

ಬೃಂದಾವನ ಗೊವಿಂದನು ಗುರುಗಳ ವೃಂದಾವನದೊಳಗಿಂದು
ಮುಂದೋರದ ಭವ ಬಂದದಿ ಸಿಲುಕಿದ ಬ್ರಿಂದವ ಪೆÇರೆಯುವರಿನ್ದು |29|

ಸುಂದರ ಗುಡಿ ಶೃಂಗಾರದಿ ಶೋಭಿಪ ಚಂದದಿ ಮಂಟಪದಲ್ಲಿ
ವಂದಿತ ಗುರು ಬೃಂದಾರಕರೆನೆದರು ಕುಂದದ ಕಾಂತಿಯೊಳಿಲ್ಲಿ |30|

ಮುತ್ತಿನ ಹಾರವು ಕಸ್ತೂರಿ ತಿಲಕವು ರತ್ನದಪದಕಗಳಿಂದ
ಚಿತ್ತದ ಬ್ರಾಂತಿಯನುಥರಿಪೌ ಪುರುಷೋತ್ತಮ ಗಾಯನದಿಂದ |31|

ದ್ವಾದಶನಾಮವು ಮೋದದಿ ಗುರುಗಳ ಸಾದೃಷ ಸದ್ಗುರುವೆಂದು
ಭೂದಿವಿಜರಗನುವಾದಿಸಿ ತೋರ್ಪುದು ಶ್ರೀಧರ ಸಂಪದರೆಂದು |32|

ದಂಡ ಕಮಂಡಲ ಕೊಂಡಿಹ ವಸನದಿ ಮಂಡಿತ ಗುರುವರರೆಂದು
ಪಂಢರಿನಾಥನ ಖಂಡಿತ ಪ್ರೀಯರು ದಂಡ ಪ್ರಮಾಣಗಳಿಂದಾ |33|

ಎಳೆತುಳಸಿಯ ವನಮಾಲೆಯು ಕೊರಳೊಳು ವಿಲಸಿತ ಕುಸುಮಗಳಿಂದಾ
ಕೊಳಲುದೂವ ಹರಿ ಕಳೆಯನು ತೋರ್ಪುದು ಮೊಳಗುವ ವಾದ್ಯಗಳಿಂದಾ |34|

ರಥವೇರಿದ ಗುರು ಪಥದೊಳು ಸಾಗಿರೆ ಪೃಥುವಿಯುಧಿಮಿದಿಕೆಂದು
ರಥಿಕರ ಡಂಗುರ ನಾದನಿನಾದದಿ ಪ್ರತಿ ಧ್ವನಿ ಕೊಡುತಿಹರಿಂದು |35|

ಭುವಿಯೊಳು ಮೊಳಗುವ ಜಯಭೇರಿಗೆ ಆ ದಿವಿಜರು ಸಂಭ್ರಮದಿಂದಾ
ಜಗದೊಳು ಪೂಮಳೆಗೆರೆವರು ಘೋಶಿಸಿ ದಿನ ದುಂಧುಭಿಧ್ವನಿಯಿಂದಾ |36|

ವರಮಂತ್ರಾಲಯ ಗುರು ಸಾಮ್ರಾಟರು ಮೆರೆವರು ವೈಭವಧಿಂದಾ
ಗುರು ಮಧ್ವೇಶನ ಹಿರಿಯ ಪತಾಕೆಯು ತೆರದುದು ಬಹುಸಿರಿಯಿಂದಾ |37|

ಹರಿಯನು ತೋರಿಸಿದ ಗುರುಸಂದರ್ಶನ ಉರುತರ ಪುಣ್ಯವದಿಂದು
ಗುರು ಸಂಕೀರ್ತನೆ ಸಿರಿಸಂಪದದೊಳು ನಿರುತದಿ ಪಾಲಿಪುದಿಂದು |38|

ಗುರು ಪಾದೋದಕ ಪೆÇರೆವದು ಭಕ್ತರ ಧುರಿತೌಘವಕಳೆದಿಂದು
ಗುರುಸೇವೆಯು ವರಪದವಿಯ ನೆರವುದು ಅರಿವುದು ಸತ್ಯವಿದೆಂದು |39|

ಗುರುಮಹರಾಜರೆ ವರ ಮುನಿತೇಜರೆ ಎರಗುವೆ ನಿಮ್ಮಡಿಗಿಂದು
ಸೆರೆಸಂಸಾರದೊಳುರುತರಗಾದೆನು ಪೆÇರೆವುದು ಕರುಣದೊಲಿಂದು |40|

ಘನಭವರೋಗದಿ ಅನುಭವರೋಗದಿ ತನುಮನ ತಾಪದಿ ನೊಂದು
ದಿನದಿನ ಕೊರಗಿದೆ ಮನದೊಳು ಮರುಗಿದೆ ಕಣಿಕರ ತೋರುವುದಿಂದು |41|

ಹಸು ತೃಷೆ ವಿಷಯದಿ ವ್ಯಸನದಿ ಬಹು ಪರ ವಶನಾದೆನು ಸೆರೆಗೊಂಡು
ಬಿಸಜಾಕ್ಷಣ ಪದ ತುಸುಸಹ ನೆನಯದೆ ಪಶು ಜೀವನ ಕೈಗೊಂಡು |42|

ಶಿಶುವೆಂದರಿಯುತ ಶಶಿ ಹಾಸದಿ ನರ ಪಶು ಮಹಪಾಪಿಯನಿಂದು
ಅಸದಳ ಭಕುತಿಯೊಳೆಸೆಯುವ ಮತಿಮನನಿಸಿ ಸಲೆ ಪೆÇರುಯುವದಿಂದು |43|

ಮೀಸಲು ಮುಡಿಪಿದು ಸೂಸಿತು ಹೃದಯದಿ ಭಾವಿಸಿ ಗುರುಪದಕೆಂದು
ಪೂಸಿದ ಪರಿಮಳ ವಾಸಿಸೆ ಬಲುಸುವಿಕಾಸಿತ ಹಾರವಿದೆಂದು |44|

ಗುರುಪದ ಸೇವಿಸಿ ಹರುಷದಿ ಭಾವಿಸಿ ಗುರುಪದ ಹಾರವನಿಂದು
ಇರಿಸಿದೆ ಪದದೊಳು ಹರಿ ವಿಠ್ಠಲೇಶನೆ ನಿರುತದಿ ಪಾಲಿಪುದೆಂದು |45|

Advertisements
%d bloggers like this: